ಕೋವಿಡ್ ಜೆಎನ್ 1 ಆತಂಕ: ಕೊಡಗು ಗಡಿಯಲ್ಲಿ ತಪಾಸಣೆ

| Published : Dec 20 2023, 01:15 AM IST

ಸಾರಾಂಶ

ವಿರಾಜಪೇಟೆ ತಾಲೂಕಿನ ಕೇರಳ ಹಾಗೂ ಕೊಡಗು ಚೆಕ್ ಪೋಸ್ಟ್ ಪೆರಂಬಾಡಿಯಲ್ಲಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಕೊಡಗಿಗೆ ನಿತ್ಯ ನೂರಾರು ವಾಹನಗಳು ಆಗಮಿಸುವ ಹಿನ್ನೆಲೆ ಕೋವಿಡ್ ರೂಪಾಂತರಿ ಕೊಡಗಿಗೂ ಹರಡುವ ಸಾಧ್ಯತೆ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತೀ ವಾಹನಗಳ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇರಳದಲ್ಲಿ ಕೋವಿಡ್ ಜೆಎನ್ 1 ತಳಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಡಗು-ಕೇರಳ, ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ.

ವಿರಾಜಪೇಟೆ ತಾಲೂಕಿನ ಕೇರಳ ಹಾಗೂ ಕೊಡಗು ಚೆಕ್ ಪೋಸ್ಟ್ ಪೆರಂಬಾಡಿಯಲ್ಲಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಕೊಡಗಿಗೆ ನಿತ್ಯ ನೂರಾರು ವಾಹನಗಳು ಆಗಮಿಸುವ ಹಿನ್ನೆಲೆ ಕೋವಿಡ್ ರೂಪಾಂತರಿ ಕೊಡಗಿಗೂ ಹರಡುವ ಸಾಧ್ಯತೆ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತೀ ವಾಹನಗಳ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಬಸ್ಸುಗಳಲ್ಲಿಯೂ ಸಾರ್ವಜನಿಕರ ಉಷ್ಣಾಂಶವನ್ನು ಪರಿಶೀಲಿಸುತ್ತಿದ್ದಾರೆ. ಕೇರಳದ ಯಾವ ಭಾಗದಿಂದ ಕೊಡಗಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಕೂಡ ದಾಖಲಿಸಲಾಗುತ್ತಿದೆ. ನಿತ್ಯ ಕೇರಳ ಹಾಗೂ ಕೊಡಗು ನಡುವೆ ನೂರಾರು ವಾಹನಗಳು ಓಡಾಡುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಕೊಡಗಿನಲ್ಲಿ ಕೋವಿಡ್ ಹರಡುವ ಆತಂಕ ಉಂಟಾಗಿದ್ದು, ಆರೋಗ್ಯ ಇಲಾಖೆ ತಪಾಸಣೆಗೆ ಮುಂದಾಗಿದೆ. ಪೆರಂಬಾಡಿಯಲ್ಲಿ ಕೋವಿಡ್ ತಪಾಸಣೆ ಸಂದರ್ಭ ಶೀತ-ಜ್ವರದಿಂದ ಬಳಲುತ್ತಿರುವವರು ಪತ್ತೆಯಾಗಿದ್ದಾರೆ. ಕೇರಳದಿಂದ ಕೊಡಗಿಗೆ ಆಗಮಿಸುತ್ತಿದ್ದ ಪ್ರಯಾಣಿಕರಲ್ಲಿ ಶೀತ ಜ್ವರ ಇರುವ ಎರಡು ಪ್ರಕರಣ ಪತ್ತೆಯಾಗಿದೆ. ತಕ್ಷಣವೇ ಸಿಬ್ಬಂದಿ ಅವರನ್ನು ವಿರಾಜಪೇಟೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ.

ಕೊಡಗು-ದಕ್ಷಿಣ ಕನ್ನಡ ಗಡಿ ಭಾಗ ಸಂಪಾಜೆಯ ಚೆಕ್ ಪೋಸ್ಟ್ ನಲ್ಲೂ ಕೂಡ ಆರೋಗ್ಯ ಇಲಾಖೆಯ ಸಿಬ್ಬಂದಿ ತಪಾಸಣೆಯಲ್ಲಿ ತೊಡಗಿದ್ದಾರೆ. ಕಾಸರಗೋಡು ಮೂಲಕ ಕೊಡಗಿಗೆ ಆಗಮಿಸುವ ಕೇರಳದ ಜನರ ಮೇಲೆ ಹೆಚ್ಚಿನ ನಿಗಾ ವಹಿಸಿ ತಪಾಸಣೆ ನಡೆಸಲಾಗುತ್ತಿದೆ.