- ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ, ಆಕ್ರೋಶ
- - -ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕಕ್ಕೆ ಕಿಡಿಗೇಡಿಗಳು ಸಗಣಿ ಎರಚಿ ಅಪವಿತ್ರಗೊಳಿಸಿದ ಆಘಾತಕಾರಿ ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ತೀವ್ರ ಆಕ್ರೋಶ ಉಂಟಾಗಿದ್ದು, ಸೋಮವಾರ ಡಿವೈಎಸ್‌ಪಿ ಬಸವರಾಜ್, ತಹಸೀಲ್ದಾರ್ ಗುರುಬಸವರಾಜಪ್ಪ ಹಾಗೂ ಪಿಐ ಸಿದ್ರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು.ಸೋಮವಾರ ಬೆಳಗಿನ ಜಾವ ಈ ಕೃತ್ಯದ ಸುದ್ದಿ ಹರಡುತ್ತಿದ್ದಂತೆ ಚಿಕ್ಕಮಲ್ಲನಹೊಳೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಾಬಾ ಸಾಹೇಬರಿಗೆ ಅಪಮಾನ ಮಾಡಿದ ವಿಕೃತ ಮನಸ್ಸುಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸೌಹಾರ್ದಕ್ಕೆ ಧಕ್ಕೆ ಸಂಚು:
2012ರ ಜನವರಿ 1ರಂದು ಈ ನಾಮಫಲಕ ಗ್ರಾಮದಲ್ಲಿ ಸ್ಥಾಪಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಇಡೀ ಹಳ್ಳಿಯಲ್ಲಿ ಸೌಹಾರ್ದ ವಾತಾವರಣವಿತ್ತು. ಆದರೆ, ಜೂ.28ರ ರಾತ್ರಿ ಮತ್ತು ಜೂನ್ 29ರ ಬೆಳಗಿನ ಜಾವ 5 ಗಂಟೆ ನಡುವಿನ ಅವಧಿಯಲ್ಲಿ ಕಿಡಿಗೇಡಿಗಳು ನಾಮಫಲಕಕ್ಕೆ ಸಗಣಿ ಎರಚುವ ಕೃತ್ಯ ಎಸಗಿದ್ದಾರೆ. ಸಮಾಜದ ಮಧ್ಯೆ ದ್ವೇಷಭಾವನೆ ಮೂಡಿಸುವ ಹಾಗೂ ಸಾರ್ವಜನಿಕ ಶಾಂತಿಭಂಗ ಮಾಡುವ ಉದ್ದೇಶದಿಂದಲೇ ಈ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಮಹೇಶ್ ಜಗಳೂರು ಪೊಲೀಸ್ ಠಾಣೆಗೆ ನೀಡಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿಯಾದ ಪಿಎಸ್‌ಐ ಧರೇಪ್ಪ ಬಿ. ದೊಡ್ಡಮನಿ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.ಡಿವೈಎಸ್‌ಪಿ ಭರವಸೆ:
ಅಂಬೇಡ್ಕರ್ ನಾಮಫಲಕಕ್ಕೆ ಮಸಿ/ಸಗಣಿ ಎರಚಿದ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರೂ ಗ್ರಾಮದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಸಹಕರಿಸಬೇಕು ಎಂದು ಡಿವೈಎಸ್‌ಪಿ ಬಸವರಾಜ್ ಮನವಿ ಮಾಡಿದರು.ಹಿರೆಮಲ್ಲನಹೊಳೆ ಗ್ರಾಮದ ಮುಖಂಡರು ಹಾಗೂ ದಸಂಸ ಮುಖಂಡರಾದ ಕುಬೇರಪ್ಪ, ಮಲೇಮಾಚಿಕೆರೆ ಸತೀಶ್, ಗೌರಿಪುರ ಕುಬೇರಪ್ಪ ಇತರರು ಈ ಸಂದರ್ಭ ಇದ್ದರು.
- - --30ಜಗಳೂರುಚಿತ್ರ2: