ಕೆಡಿಪಿ ಸಭೆಯಲ್ಲಿ ಭುಗಿಲೆದ್ದ ಗೋ ಹತ್ಯೆ ಆಕ್ರೋಶ

| Published : Jun 30 2024, 12:48 AM IST

ಕೆಡಿಪಿ ಸಭೆಯಲ್ಲಿ ಭುಗಿಲೆದ್ದ ಗೋ ಹತ್ಯೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋ ಹತ್ಯೆ ವಿಚಾರವಾಗಿ ಜೋರು ಗಲಾಟೆ ನಡೆಯಿತು.

ಸಭೆ ಆರಂಭ ಬೆನ್ನಲ್ಲೆ ಗೋ ಹತ್ಯೆ ವಿಚಾರವಾಗಿ ಧ್ವನಿ ಎತ್ತಿದ್ದ ಶಿವಮೊಗ್ಗ ನಗರದ ಶಾಸಕ ಎಸ್‌.ಎನ್‌.ಚನ್ನಬಸಪ್ಪ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಶಿವಮೊಗ್ಗದಲ್ಲಿ ಮಾತ್ರ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ. ಗೋ ಹತ್ಯೆ ಮಾಡಿದವರ ವಿರುದ್ಧ ದೂರು ದಾಖಲಿಸಿದರೂ ಪೊಲೀಸರು ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪಕ್ಷದ ವಿಧಾನ ಪರಿಷತ್‌ ಸದಸ್ಯೆ ಬಲ್ಕಿಸ್‌ ಬಾನು ಅವರು ಜಿಲ್ಲೆಯಲ್ಲಿ ಗೋ ಹತ್ಯೆ ಎಲ್ಲೂ ನಡೆದಿಲ್ಲ. ಬಕ್ರೀದ್‌ ಹಬ್ಬ ಸಂದರ್ಭ ಕೇವಲ ಕುರಿ ಗಳನ್ನು ಬಲಿ ನೀಡಲಾಗಿದೆ ಎಂದು ಹೇಳುತ್ತಿದ್ದಂತೆ ಸಿಟ್ಟಿಗೆದ್ದ ಶಾಸಕ ಚನ್ನಬಸಪ್ಪ ‘ಗೋ ಹತ್ಯೆ ನಡೆದಿಲ್ಲ ಎಂದರೆ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ಏರುಧ್ವನಿಯಲ್ಲಿ ಹೇಳಿದ ಅವರು, ಬಲ್ಕಿಸ್‌ ಬಾನು ಅವರು ಇಷ್ಟು ದಿನ ಬೆಂಗಳೂರಿನಲ್ಲಿ ಇದ್ದರು ಈಗ ಬಂದಿದ್ದಾರೆ. ಎಂದು ಅವರಿಗೆ ಮೊಬೈಲ್‌ನಲ್ಲಿದ್ದ ವಿಡಿಯೋ ತೋರಿಸುತ್ತಾ ಗೋವುಗಳು ನಿಮಗೆ ಕುರಿಗಳಂತೆ ಕಾಣುತ್ತವೆಯೇ? ಪ್ರಶ್ನಿಸಿ ತಮ್ಮ ಮೊಬೈಲ್‌ ಅನ್ನು ನೆಲಕ್ಕೆ ಬಿಸಾಡಿದರು.

ನೀವು ಈ ಕಾಯ್ದೆ ತೆಗೆದು ಹಾಕುತ್ತೇವೆ ಅಂತಾ ಹೇಳಿದ್ದಿರಿ. ಆದರೆ, ಇನ್ನು ಈ ಕಾಯ್ದೆ ಜಾರಿಯಲ್ಲಿದೆ. ಕಾಯ್ದೆ ಜಾರಿಯಲ್ಲಿರುವಾಗ ಕಾನೂನು ಪಾಲನೆ ಮಾಡದೇ ಇರುವುದು ಸರಿಯಲ್ಲ. ಸರ್ಕಾರದಿಂದ ಕಾಯ್ದೆ ಪಾಲಿಸಬಾರದೆಂದು ನಿರ್ದೇಶನ ನೀಡಿದ್ದಾರಾ ಎಂದು ಪ್ರಶ್ನಿಸಿದರು. ಗೋ ಹತ್ಯೆ ಮಾಡಿರುವ ಅನೇಕ ವಿಡಿಯೋ ನನ್ನ ಬಳಿ ಇದೆ. ಗೋ ಹತ್ಯೆ ತಡೆಯುವ ತಾಕತ್ತು ನಿಮಗಿಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕರ ಮಾತಿಗೆ ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ ಧ್ವನಿಗೂಡಿಸಿದರು.

ಆನೆ ದಾಳಿಗೆ ಸಾವು; ಪರಿಹಾರವಿಲ್ಲವೇ?:

ಈ ಬಾರಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದೆ. ನದಿಗಳು, ಕೆರೆಗಳು ಇನ್ನೂ ತುಂಬಿಲ್ಲ , ಈ ಬಗ್ಗೆ ಮುಂಜಾಗ್ರತೆ ವಹಿಸಿ ಕಾರ್ಯಕ್ರಮ ರೂಪಿಸಲು ಸಿದ್ಧತೆ ನಡೆಸಬೇಕು ಎಂದು ಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.

ಸಭೆಯ ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ರೈತರಿಗೆ ನಿಗಧಿತ ಸಮಯದಲ್ಲಿ ಸೌಲಭ್ಯಗಳು ದೊರಕದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನಿಗದಿತ ಸಮಯದಲ್ಲಿ ಕೆಡಿಪಿ ಸಭೆಯನ್ನೇ ಕರೆಯದೇ ರೈತರಿಗೆ ಹೇಗೆ ಸೌಲಭ್ಯ ಒದಗಿಸುತ್ತೀರಿ ಎಂದು ಆಕ್ರೋಶ ಭರಿತವಾಗಿ ಪ್ರಶ್ನಿಸಿದರು.

ಅಪರ ಜಿಲ್ಲಾಧಿಕಾರಿ ಇದಕ್ಕೆ ಉತ್ತರಿಸಿ, ಜಿಲ್ಲೆಯಲ್ಲಿ 275 ಮನೆಗಳಿಗೆ ಹಾನಿಯಾಗಿದೆ. 2.28 ಕೋಟಿ ರು. ಪರಿಹಾರ ನೀಡಲಾಗಿದೆ ಎಂದು ಉತ್ತರಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕಳೆದ ಕೆಡಿಪಿ ಸಭೆ ಕರೆಯುವ ಸಂದರ್ಭದಲ್ಲೇ ಅಧಿವೇಶನ ಪ್ರಕಟಗೊಂಡಿದ್ದರಿಂದ ಅಂದಿನ ಸಭೆಯನ್ನು ಮುಂದೂಡಲಾಯಿತು. ಅದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಇಲ್ಲಿಯವರೆಗೆ 68 ಕೋಟಿ ರು. ಬೆಳೆ ವಿಮೆ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

ಶಾಸಕಿ ಶಾರದಾ ಪೂರ್‍ಯನಾಯ್ಕ್, ಮಳೆ ಹಾನಿಗೆ ಒಳಗಾದ ಮನೆಗಳಿಗೆ ಪರಿಹಾರ ನೀಡುವ ವಿಷಯ ಪ್ರಸ್ತಾಪಿಸಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಬಿ ಖಾತೆ ಹೊಂದಿದ ಮನೆಗಳಿಗೆ ನೆರೆ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಆದರೆ ಅಧಿಕಾರಿಗಳು ನೆರೆ ಪೀಡಿತರನ್ನು ಇಲ್ಲದ ನೆಪ ಹೇಳಿ ಪರಿಹಾರದಿಂದ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಈ ಕುರಿತು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆಯಲಾಗಿದೆ. ಉತ್ತರ ಬಂದ ತಕ್ಷಣ ಪರಿಹಾರ ಕೊಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಪರಿಹಾರ ವಿಚಾರದಲ್ಲಿ ಅಧಿಕೃತ, ಅನಧಿಕೃತ ಎಂಬ ವಿಂಗಡಣೆ ಸಲ್ಲದು. ಇದಕ್ಕೆ ಸಂಬಂಧಿಸಿದ ಸರ್ಕಾರದ ಮಾರ್ಗದರ್ಶಿ ಇನ್ನೂ ಬದಲಾವಣೆಯಾಗಿಲ್ಲ. ಆದ್ದರಿಂದ ಸಂತ್ರಸ್ಥರಿಗೆ ಪರಿಹಾರ ನೀಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಚರ್ಚೆಯಲ್ಲಿ ಪಾಲ್ಗೊಂಡು ಕೃಷಿ ಇಲಾಖೆಗೆ ಸಂಬಂಧಿಸಿದ 2024-25ರ ಕ್ರಿಯಾ ಯೋಜನೆ ಇನ್ನೂ ಸಿದ್ಧವಾಗಿಲ್ಲ. 5 ಪಶು ಪಾಲನಾ ಅಧಿಕಾರಿಗಳು ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಎಂಬುದನ್ನು ಸಭೆ ಗಮನಕ್ಕೆ ತಂದಾಗ ಇನ್ನೂ 10 ರಿಂದ 15 ದಿನಗಳಲ್ಲಿ ಇದನ್ನು ಸಿದ್ಧಪಡಿಸುವುದಾಗಿ ಕೃಷಿ ಅಧಿಕಾರಿಗಳು ತಿಳಿಸಿದರು.

ಅಡಕೆ ಬೆಳೆ ಸುದೀರ್ಘ ಬೆಳೆಯಾಗಿದ್ದು, ತಮ್ಮ ಪಹಣಿಯ ಕಾಲಂನಲ್ಲಿ ಅಡಿಕೆ ಬೆಳೆಯ ಉಲ್ಲೇಖವೇ ನಾಪತ್ತೆಯಾಗಿರುವ ವಿಷಯವನ್ನು ಸಭೆ ಗಮನಕ್ಕೆ ತಂದರು. ಸುದೀರ್ಘ ಬೆಳೆಗಳಿಗೆ ಪ್ರತಿ ವರ್ಷ ಬೆಳೆ ನಮೂದು ಮಾಡುವ ಪದ್ಧತಿಯನ್ನು ಕೈಬಿಡಬೇಕು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು.

ಹೊಸನಗರ ತಾಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಈವರೆಗೆ ಪರಿಹಾರ ನೀಡದಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವರು 1 ತಿಂಗಳಲ್ಲಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಸಂಗಮೇಶ್, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿ.ಪಂ. ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸುಧಾಕರ್ ಸ್ನೇಹಲ್ ಲೋಖಂಡೆ ಇನ್ನಿತರರಿದ್ದರು.

ಕಾನೂನು ಪಾಲನೆಯಾಗಲಿ

ಗೋ ಹತ್ಯೆ ಚರ್ಚೆ ತಾರಕ್ಕೇರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಚಿವ ಮಧು ಬಂಗಾರಪ್ಪ. ಈ ಬಗ್ಗೆ ಮಾಹಿತಿ ಬಂದರೆ ನನಗೆ ಕೊಡಿ, ಎಲ್ಲರೂ ಕಾನೂನು ಪಾಲಿಸಬೇಕು. ನಾನಂತೂ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ. ಹಾಗೆ ಯಾವ ಅಧಿಕಾರಿಗಳಿಗೂ ನಿರ್ದೇಶನ ನೀಡಿಲ್ಲ. ಗೋ ಹತ್ಯೆ ನಿಷೇಧ ಕಾನೂನು ಜಾರಿ ಸರಿಯಾಗಿ ಪಾಲನೆ ಮಾಡಿ ಎಂದು ಎಸ್.ಪಿ.ಮಿಥುನ್ ಕುಮಾರ್ ಸೂಚನೆ ನೀಡಿದರು.ಅಧಿಕಾರಿಗೆ ನೋಟೀಸ್

ಸಭೆಯಲ್ಲಿ ಭದ್ರಾವತಿಗೆ ಸಂಬಂಧಿಸಿದ ವಿಷಯದ ಕುರಿತ ಶಾಸಕ ಎಸ್.ಎಲ್. ಬೋಜೇಗೌಡ ಮಾಹಿತಿ ಕೇಳಿದರು. ಇದಕ್ಕೆಅಧಿಕಾರಿಗಳು ಮಾಹಿತಿ ತಂದಿಲ್ಲ ಎಂದು ಉತ್ತರಿಸಿದರು. ಅಧಿಕಾರಿಗಳು ಸಭೆಗೆ ಬರುವಾಗ ಮಾಹಿತಿ ತರಬೇಕೆಂಬ ತಿಳುವಳಿಕೆ ಹೊಂದಿರಬೇಕು. ಮಾಹಿತಿಯನ್ನು ತರದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಚಿವರನ್ನು ಒತ್ತಾಯಿಸಿದಾಗ ಈ ಅಧಿಕಾರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಮಧು ಬಂಗಾರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.