ಅಂಗನವಾಡಿಅಕ್ರಮಕ್ಕೆ ಕಡಿವಾಣ ಹಾಕಿ

| Published : Jun 30 2024, 12:48 AM IST

ಸಾರಾಂಶ

ಅಂಗನವಾಡಿ ಕೇಂದ್ರಗಳ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಸಾವಿತ್ರಿ ಗುಗ್ಗರಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಂಗನವಾಡಿ ಕೇಂದ್ರಗಳ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಸಾವಿತ್ರಿ ಗುಗ್ಗರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಾಯಂದಿರರ ಮತ್ತು ಮಕ್ಕಳ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ರೀತಿಯ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಆದರೆ ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳು ಅಂಗನವಾಡಿ ಕಾರ್ಯಕರ್ತೆಯರ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನಿರ್ಮಾಣವಾದಂತೆ ಭಾಸವಾಗುತ್ತಿವೆ. ಬಹುತೇಕ ಅಂಗನವಾಡಿ ಕೇಂದ್ರಗಲ್ಲಿ ಮಕ್ಕಳೇ ಇರುವುದಿಲ್ಲ. ಆದರೂ ಆ ದಿನದ ಹಾಜರಾತಿ ಪೂರ್ತಿಯಾಗಿ ತೋರಿಸಿ ಆ ಮಕ್ಕಳಿಗೆ ಬರುವ ಎಲ್ಲ ರೀತಿಯ ಸೌಲಭ್ಯಗಳನ್ನು (ಆಹಾರ ಕಿಟ್) ಹೊರಗಡೆ ಖಾಸಗಿ ವ್ಯಕ್ತಿಗಳಿಗೆ ಮಾರಿಕೊಳ್ಳುತ್ತಿರುವ ಸಂಗತಿ. ಜಿಲ್ಲಾದ್ಯಂತ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳು ಕೇವಲ ಸರಕಾರಕ್ಕೆ ಖೊಟ್ಟಿ ವರದಿ ನೀಡುವ ಕೇಂದ್ರಗಳಾಗಿ ನಿರ್ಮಾಣವಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಈ ಕಹಿ ಸತ್ಯವು ತಮಗೂ ಸೇರಿದಂತೆ ಇಲಾಖೆಯ ಬಹುತೇಕ ಸಿಬ್ಬಂದಿಗಳಿಗೆ ತಿಳಿದ ವಿಷಯವೇ ಆದರೂ ಈ ವಿಷಯದ ಬಗ್ಗೆ ತಾವು ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರುವುದಿಲ್ಲ. ಆದ್ದರಿಂದಾಗಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತಮ್ಮ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಹಮಿದ ಇನಾಮದಾರ, ವಿಕ್ರಮ್ ವಾಘಮೋರೆ, ದುರ್ಗಪ್ಪ ಬೂದಿಹಾಳ, ಕಾಂತುಗೌಡ ಬೆಂಡವಾಡ, ಪ್ರವೀಣ ಕನಸೇ, ರಾಕೇಶ ಇಂಗಳಗಿ ರಾಘವೇಂದ್ರ ಛಲವಾದಿ, ಸುರೇಂದ್ರ ಕುನಸಲೇ, ಭೀಮಾಶಂಕರ ಕಾಂಬಳೆ, ಲಕ್ಷ್ಮಣ ಚಡಚಣ ಮುಂತಾದವರು ಇದ್ದರು.