ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಯಲ್ಲಪ್ಪ

| Published : Jun 30 2024, 12:48 AM IST

ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಯಲ್ಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಕನ್ನಡ ಸಾಹಿತ್ಯ, ಕವನ ರಚನೆ, ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಬೇಕು. ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಕ್ಕಳು ಕನ್ನಡ ಸಾಹಿತ್ಯ, ಕವನ ರಚನೆ, ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಬೇಕು. ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ, ಶಿಕ್ಷಕ ಯಲ್ಲಪ್ಪ ಹರ್ನಾಳಗಿ ತಿಳಿಸಿದರು.

ತಾಲೂಕಿನ ಅಳವಂಡಿ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಅಳವಂಡಿ ಹೋಬಳಿ ಘಟಕದ ವತಿಯಿಂದ ಗುರುವಾರ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಶಸ್ವಿ ಸಾಹಿತಿ ಹಿಂದೆ ಪ್ರೇರಕ ಶಕ್ತಿಯಾಗಿ ಮಹಿಳೆ ಇದ್ದಾಳೆ. ಹಿಂದಿನ ದಿನಮಾನದಲ್ಲಿ ಸಾಹಿತ್ಯವನ್ನು ವಿದ್ಯೆ ಇಲ್ಲದವರೂ ಕೂಡ ರಚಿಸಿದ್ದಾರೆ. ಅದರಲ್ಲೂ ಮಹಿಳೆಯರಂತು ತೊಟ್ಟಿಲು ಪದ, ಮದುವೆ ಮುಂಜಿ, ಮನೆಯಲ್ಲಿ ನಡೆಯುವ ಇತರ ಕಾರ್ಯಗಳಲ್ಲಿ ಮಹಿಳೆಯರು ಹಾಡು ರಚಿಸಿ ಹಾಡಿ ಸಾಹಿತ್ಯ ಬೆಳೆಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ಬಂದ ಮೇಲೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಡಿದ್ದಾರೆ. ವಿದ್ಯಾರ್ಥಿಗಳು ತಮಗೆ ಸಾಹಿತ್ಯ ಬರುವುದಿಲ್ಲವೆಂದು ಹಿಂಜರಿಕೆ ಪಡದೆ ಸಾಹಿತ್ಯ ರಚಿಸಬೇಕು ಹಾಗೂ ಅದರಲ್ಲಿ ತಪ್ಪು ತಡೆಗಳನ್ನು ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸಿ ತಿದ್ದಿಕೊಂಡು ಸಾಹಿತ್ಯ ರಚಿಸಬೇಕು. ಉತ್ತಮ ಸಾಹಿತ್ಯ ರಚನೆ ನಿಮ್ಮನ್ನು ಸಮಾಜ ಗುರುತಿಸುವಂತೆ ಮಾಡುತ್ತದೆ. ಎಲ್ಲರೂ ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸಬೇಕು ಹಾಗೂ ಸ್ವಯಂ ಪ್ರತಿಭೆಯಿಂದ ಮುಂದೆ ಬರಬೇಕು ಎಂದರು.

ಸಾಹಿತಿ ನೀಲಪ್ಪ ಹಕ್ಕಂಡಿ ಮಾತನಾಡಿ, ಕನ್ನಡ ಭಾಷೆ ಮನಸ್ಸಿಗೆ ಮುದ ನೀಡುವ ಭಾಷೆಯಾಗಿದೆ ಎಂದರು.

ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮಲ್ಲಪ್ಪ ಕುರಿ, ಕಿರಣ ಅಂಗಡಿ ಕನ್ನಡ ಸಾಹಿತ್ಯದ ಬೆಳವಣಿಗೆ, ಕನ್ನಡ ಸಾಹಿತ್ಯ ರಚನೆ ಹಾಗೂ ಮಕ್ಕಳು ಸಾಹಿತ್ಯ ರಚಿಸುವ ಕುರಿತು ಮಾತನಾಡಿದರು. ನಂತರ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕಿ ಜಯಾ ತಳಗೇರಿ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಶಿಕ್ಷಕರಾದ ಫಕೀರಮ್ಮ ಮಠದ, ಸುನೀತಾ, ಇಸರತ್ಬಾಪನು, ಸುಜಾತಾ, ಸವಿತಾ, ಶೃತಿ, ನಿಲಯ ಮೇಲ್ವಿಚಾರಕಿ ಚೆನ್ನಮ್ಮ ಚಿನ್ನೂರು, ಪ್ರಮುಖರಾದ ಜೂನುಸಾಬ ವಡ್ಡಟ್ಟಿ ಇತರರು ಇದ್ದರು.