ಬಾಳೆಹೊನ್ನೂರಿನಲ್ಲಿ ಗೋ ಪೂಜಾ, ಬಲಿಪಾಡ್ಯಮಿ ಸಂಭ್ರಮ

| Published : Oct 24 2025, 01:00 AM IST

ಬಾಳೆಹೊನ್ನೂರಿನಲ್ಲಿ ಗೋ ಪೂಜಾ, ಬಲಿಪಾಡ್ಯಮಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು ಹೋಬಳಿಯಾದ್ಯಂತ ಬುಧವಾರ ರೈತರು ಸಡಗರ, ಸಂಭ್ರಮದಿಂದ ಬಲಿಪಾಡ್ಯಮಿ, ಗೋ ಪೂಜೆ ಆಚರಿಸಿದರು.

ಮುಗಿಲು ಮುಟ್ಟಿದ ದೀಪೋಳಿಗೆ ಘೋಷಣೆ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ಹೋಬಳಿಯಾದ್ಯಂತ ಬುಧವಾರ ರೈತರು ಸಡಗರ, ಸಂಭ್ರಮದಿಂದ ಬಲಿಪಾಡ್ಯಮಿ, ಗೋ ಪೂಜೆ ಆಚರಿಸಿದರು.ಬಲಿಪಾಡ್ಯಮಿ ದಿನ ಬುಧವಾರ ಬೆಳಿಗ್ಗೆ ರೈತರು ತಮ್ಮ ಮನೆಗಳಲ್ಲಿನ ಗೋವುಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ಹೂ ಮಾಲೆ, ವಿವಿಧ ಫಲಗಳನ್ನು ಮಾಲೆ ಮಾಡಿ ಹಾಕಿ ಮೈ ತುಂಬಾ ಬಣ್ಣದ ಚಿತ್ತಾರ ಬರೆದು ಸಿಂಗರಿಸಿ ಪೂಜಿಸಿದರು. ಗೋ ಕೊಟ್ಟಿಗೆ ಗಳನ್ನು ತಳಿರು ತೋರಣ, ಹೂ ಮಾಲೆಗಳಿಂದ ಅಲಂಕರಿಸಿದ್ದರು. ಗೋವುಗಳಿಗೆ ಅಡಕೆ ಕಾಯಿ, ಹಿಂಗಾರ, ಉಗಣೆಕಾಯಿ, ಪಚ್ಚೆತೆನೆ, ಏಲಕ್ಕಿ ಗೆರೆ, ಚೆಂಡು ಹೂವು, ಬಾಳೆಹಣ್ಣುಗಳಿಂದ ಮಾಡುವ ಮಾಲೆ ಕಟ್ಟಿದ್ದು ವಿಶೇಷವಾಗಿತ್ತು. ಪೂಜೆ ನಂತರ ಗೋವುಗಳಿಗೆ ದೋಸೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಸೇರಿದಂತೆ ವಿವಿಧ ಆಹಾರ ನೀಡಿ ಪಟಾಕಿ ಸಿಡಿಸಿ ಕೊಟ್ಟಿಗೆ ಯಿಂದ ಮೇಯಲು ಹೊರ ಕಳುಹಿಸಿದರು. ಸಂಜೆ ಮನೆಗೆ ವಾಪಾಸ್ಸು ಬಂದ ಗೋವುಗಳನ್ನು ಕೊಟ್ಟಿಗೆ ಬಾಗಿಲಿನಲ್ಲಿ ಓನಕೆ ಗಳನ್ನು ಅಡ್ಡ ಇಟ್ಟು, ಓಕುಳಿ ಮಾಡಿ ಒಳ ಬರಮಾಡಿಕೊಂಡರು. ಇದು ಹಿಂದಿನಿಂದ ನಡೆದುಬಂದ ಸಂಪ್ರದಾಯ.ಅದಲ್ಲದೇ ಬಲಿಪಾಡ್ಯಮಿ ದಿನ ಕೃಷಿಕರು ತಮ್ಮ ಮನೆಗಳಲ್ಲಿ ವರ್ಷವಿಡೀ ಉಪಯೋಗಿಸುವ ನೇಗಿಲು, ನೊಗ, ಕತ್ತಿ, ಹಾರೆ, ಅಕ್ಕಿ ಮಡಕೆ, ಸೇರು, ಮೊರ ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಇಟ್ಟು ಅಲಂಕರಿಸಿ ಮೇಳಿಗೆ ದೇವರು (ಮಿಳ್ಳಿದೇವರು, ಮಿಳ್ಳೆ ದೇವ್ರು) ಎಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಗೆ ಮಲೆನಾಡಿನಲ್ಲಿ ದೊರೆಯುವ ಪಚ್ಚೆತೆನೆ, ಅಡಕೆ ಹಿಂಗಾರ, ಬಾಳೆಹಣ್ಣು, ಎಲೆ ಅಡಕೆ ಮುಂತಾದ ವಸ್ತುಗಳನ್ನು ಮಾಲೆ ಮಾಡಿ ಕಟ್ಟುವುದು. ಜೇಡಿ, ಕೆಮ್ಮಣ್ಣಿನ ಪಟ್ಟೆ ತೆಗೆಯುವುದು, ವಿವಿಧ ಫಲಾಸ್ತ್ರಗಳನ್ನು ಇಡುವುದು ವಿಶೇಷ.ಎಲ್ಲಾ ಕೃಷಿ ಉಪಕರಣಗಳಿಗೆ ಹಾಗೂ ಅಡಕೆ, ತೆಂಗಿನ ಮರ, ಮನೆಯ ಬಾಗಿಲು ಮುಂತಾದವುಗಳಿಗೆ ಜೇಡಿಮಣ್ಣು, ಕೆಮ್ಮಣ್ಣಿನ ಪಟ್ಟೆ ಬಳಿಯುವುದೂ ಸಹ ಈ ಹಬ್ಬದ ವಿಶೇಷವಾಗಿದ್ದು, ದೀಪಾವಳಿ ರೈತರ ಹಬ್ಬವಾಗಿದೆ. ಬಲೀಂದ್ರ ಪೂಜೆ: ಪಾಡ್ಯದ ಅಂಗವಾಗಿ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಬಲೀಂದ್ರ ಪೂಜೆ ಮೂಲಕ ಬಲಿ ಚಕ್ರವರ್ತಿಯನ್ನು ನೆನಪಿಸಿಕೊಳ್ಳಲಾಯಿತು. ಕತ್ತಲಾಗುತ್ತಿದ್ದಂತೆ ಮನೆ ಮುಂಭಾಗದ ತುಳಸಿ ಕಟ್ಟೆಯಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ ಬಳಿಕ ತಮ್ಮ ಕೃಷಿ ಜಮೀನು, ತೋಟ, ಗದ್ದೆ ಹಾಗೂ ಮನೆಗಳ ಮುಂಭಾಗದಲ್ಲಿ ಸಾಲು ಸಾಲು ಹಣತೆಗಳನ್ನು ಹಚ್ಚಿದರು. ಮಲೆನಾಡು ಭಾಗದಲ್ಲಿ ದೀಪಾವಳಿಗೆ ದೂಪದಿಂದ ಮಾಡಿದ ದೂಪದ ಕೋಲಿನಿಂದ ದೂಪಾರತಿ ಮಾಡುವುದು ವಿಶೇಷ. ದೀಪ ಹಚ್ಚುವ ಸಂದರ್ಭದಲ್ಲಿ ಮನೆ ದೇವರು, ಗ್ರಾಮ ದೇವರು, ಇಷ್ಟ ದೇವರು ಸೇರಿದಂತೆ ವಿವಿಧ ದೇವರುಗಳ ಹೆಸರು ಹೇಳುತ್ತಾ ದೀಪೋಳಿಗೆ, ದೀಪೋಳಿಗೆ ಎಂದು ಕೂಗುತ್ತ ತೆರಳಿ ಸಂಭ್ರಮಿಸಿದರು. ದೀಪೋಳಿಗೆ ಘೋಷಣೆಗಳು ಮುಗಿಲು ಮುಟ್ಟಿದವು. ಪಟಾಕಿಗಳು ಬಾನಂಗಳದಲ್ಲಿ ಆಕರ್ಷಕ ಚಿತ್ತಾರ ಮೂಡಿಸಿದವು. ಬುಧವಾರ ವಿವಿಧೆಡೆ ಅಂಗಡಿ ಮುಂಗಟ್ಟು ಗಳಲ್ಲಿ ಧನಲಕ್ಷ್ಮಿ ಪೂಜೆ, ದೇವಾಲಯಗಳಲ್ಲಿ ವಾಹನ ಪೂಜೆ ನಡೆಯಿತು. ದೀಪಾವಳಿ ಅಂಗವಾಗಿ ಗುರುವಾರ ಕರಿ-ಸಿರಿ ಹಬ್ಬ, ಭಗಿನೀ ಗೃಹೇ ಭೋಜನಂ ನಡೆಯಿತು. ಶುಕ್ರವಾರ ಕದಿರು ತರುವುದು, ವರ್ಷ ತಡಕು (ವರ್ಷದಡುಗೆ) ಹಬ್ಬ ನಡೆಯಲಿದೆ.

೨೩ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಕುಂಬತ್ತಿ ಗ್ರಾಮದ ಪ್ರಗತಿಪರ ಕೃಷಿಕರಾದ ಸುಶೀಲಮ್ಮ ಕುಟುಂಬದಲ್ಲಿ ಗೋ ಪೂಜೆ ನೆರವೇರಿಸಿ ಕುಟುಂಬಸ್ಥರು ಗೋವುಗಳಿಗೆ ಗೋ ಗ್ರಾಸ ನೀಡಿದರು.೨೩ಬಿಹೆಚ್‌ಆರ್ ೨:

ಬಾಳೆಹೊನ್ನೂರಿನಲ್ಲಿ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿವಿಧ ಉಪಕರಣಗಳನ್ನು ಪೂಜಿಸಿರುವುದು. ೨೩ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ಮಾರಿಗುಡಿ ರಸ್ತೆಯ ಕೃಷಿಕ ಯಜ್ಞಪುರುಷಭಟ್ ಅವರ ಮನೆಯಲ್ಲಿ ಕೃಷಿ ಉಪಕರಣಗಳ ಮಿಳ್ಳೆ ದೇವರನ್ನು ಸಂಪ್ರದಾಯಬದ್ಧವಾಗಿ ಪೂಜಿಸಿರುವುದು.