ಗೋಹತ್ಯೆ, ಗೋ ಕಳ್ಳತನ ಹಾಗೂ ಗೋಮಾಂಸ ಸಾಗಾಟ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ ಹಾಗೂ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಗೋಹತ್ಯೆ, ಗೋ ಕಳ್ಳತನ ಹಾಗೂ ಗೋಮಾಂಸ ಸಾಗಾಟ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ ಹಾಗೂ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ನಿರಂತರವಾಗಿ ಗೋ ಕಳ್ಳತನ, ಗೋ ಹತ್ಯೆ ಹಾಗೂ ಗೋಮಾಂಸ ಸಾಗಾಟದ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಪಕ್ಕದ ತಾಲೂಕುಗಳಾದ ಸವಣೂರ, ಹಾನಗಲ್, ಬಂಕಾಪುರ, ಹುಬ್ಬಳ್ಳಿ ಹಾಗೂ ಕಲಘಟಗಿ ಭಾಗಗಳಿಂದ ಅಕ್ರಮವಾಗಿ ಗೋಮಾಂಸ ಸಾಗಾಟ ನಡೆಯುತ್ತಿರುವ ಮಾಹಿತಿ ಲಭ್ಯವಾಗುತ್ತಿದೆ. ಜೊತೆಗೆ ಮುಂಡಗೋಡ ನಗರದ ಕೆಲವು ಬಿರಿಯಾನಿ ಹೋಟೆಲ್‌ಗಳಲ್ಲಿ, ಗೋಮಾಂಸದಿಂದ ತಯಾರಿಸಿದ ಆಹಾರ ಪದಾರ್ಥಗಳು ಮಾರಾಟವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ. ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳಲಿ, ಅಮಾಯಕ ಗೋವುಗಳನ್ನು ಕಳ್ಳ ಸಾಗಾಣಿಕೆ ಮೂಲಕ ವಧೆ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದ್ದು, ನಗರದ ಬನ್ನಿಕಟ್ಟಿ ಸಮೀಪ ಅನಧಿಕೃತ ಖಸಾಯಿ ಖಾನೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಕುರಿತು ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕರ್ನಾಟಕದಲ್ಲಿ ಜಾರಿಯಲ್ಲಿರುವ ಗೋಸಂರಕ್ಷಣಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಸಾರ್ವಜನಿಕರಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಂಡಗೋಡ ತಾಲೂಕು ಹಿಂದೂ ಜಾಗರಣ ವೇದಿಕೆ ಸಂಚಾಲಕ ಪ್ರಕಾಶ ಬಡಿಗೇರ, ಬಜರಂಗ ದಳ ಸಂಚಾಲಕ ಶಂಕರ್ ಲಮಾಣಿ, ಶ್ರೀರಾಮ ಸೇನೆಯ ಮಂಜು ಹರಿಜನ, ವಿಶ್ವ ಹಿಂದೂ ಪರಿಷತ್ ನ ತಂಗಂ ಚಿನ್ನನ್, ವಿಶ್ವನಾಥ್ ನಾಯರ್, ಮಂಜುನಾಥ್ ಪಾಟೀಲ್, ಸುರೇಶ್ ಕಲ್ಲೊಳ್ಳಿ, ಮಂಜುನಾಥ ರೇವಣಕರ, ಹರೀಶ ಪೂಜಾರ, ಬಸವರಾಜ ಠಣಕೆದಾರ, ಶ್ರೀಕಾಂತ್, ರಾಕೇಶ್, ರವಿ ಹಿರೇಮಠ ಭರತರಾಜ ಹದಳಗಿ, ಚಿದಾನಂದ್ ಬಡಿಗೇರ್, ಮಲ್ಲಿಕಾರ್ಜುನ ಗೌಳಿ ಮುಂತಾದವರಿದ್ದರು.-----

೨೬ಎಮ್.ಎನ್.ಡಿ೧,೨- ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸಿದರು.