ಹಾನಗಲ್ಲ ತಾಲೂಕಿನಲ್ಲಿ ನಿರಂತರ ಮಳೆಗೆ ಹಳದಿಯಾದ ಗೋವಿನಜೋಳ ಬೆಳೆ

| Published : Aug 04 2025, 12:15 AM IST

ಸಾರಾಂಶ

ಸ್ವಲ್ಪ ತಡವಾಗಿ ಬಿತ್ತನೆಯಾಗಿರುವುದು, ತಗ್ಗು ಪ್ರದೇಶದಲ್ಲಿ ಬಿತ್ತನೆಯಾಗಿರುವುದು, ಕೆರೆಗಳ ಕೆಳ ಭಾಗದ ಜಮೀನಿನಲ್ಲಿ ಬಿತ್ತನೆಯಾಗಿರುವ ಗೋವಿನಜೋಳ, ದ್ವಿದಳ ಧಾನ್ಯ, ಹತ್ತಿ ಅತಿಯಾದ ತೇವದಿಂದಾಗಿ ಜವುಗು ಹಿಡಿದು ಹಳದಿಯಾಗಿವೆ.

ಮಾರುತಿ ಶಿಡ್ಲಾಪೂರಹಾನಗಲ್ಲ: ಈ ಬಾರಿ ನಿರಂತರ ಮಳೆಗೆ ಭೂಮಿ ಜವುಳು ಹಿಡಿದು ಗೋವಿನಜೋಳ (ಮೆಕ್ಕೆಜೋಳ) ಗಿಡಗಳು ಹಳದಿಯಾಗಿದೆ. ಹೀಗಾಗಿ ಕೃಷಿಕರ ಪಾಲಿಗೆ ನೆಚ್ಚಿನ ಗೋವಿನಜೋಳ ಫಸಲು ಕೈಸೇರುವುದು ಅನುಮಾನ ಎನ್ನುವಂತಾಗಿದೆ.

ಭತ್ತದ ನಾಡು ಹಾನಗಲ್ಲಿಗೆ ಲಗ್ಗೆ ಇಟ್ಟ ಗೋವಿನಜೋಳ ಹತ್ತಾರು ವರ್ಷಗಳಿಂದ ಸಮಸ್ಯೆಗೆ ಸಿಲುಕುತ್ತಿದೆ. ಹಿಂದೆ ಮಳೆ ಕೊರತೆಯಿಂದ ರೈತರು ಕೈಸುಟ್ಟುಕೊಂಡಿದ್ದರು. ಕಳೆದೆರಡು ವರ್ಷಗಳಿಂದ ಮಳೆ ಹೆಚ್ಚಾಗಿ ಬಿತ್ತನೆ ಪ್ರಮಾಣವೇ ಕಡಿಮೆಯಾಗಿದೆ. ಈ ವರ್ಷ ರೋಗ ಕಾಡುತ್ತಿದೆ.

ತಾಲೂಕಿನಲ್ಲಿ 46,687 ಹೆಕ್ಟೇರ್ ಕೃಷಿ ಭೂಮಿಯಲ್ಲಿ 42 ಸಾವಿರ ಹೆಕ್ಟೇರ್‌ಗೂ ಅಧಿಕ ಕೃಷಿ ಬಿತ್ತನೆ ಪೂರ್ಣಗೊಂಡಿದೆ. 12400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ, ನಾಟಿಯಾಗಿದೆ. 30 ಹೆಕ್ಟೇರ್‌ನಲ್ಲಿ ಹೆಸರು, ಅಲಸಂದೆ, ಉದ್ದು ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆಯಾಗಿದೆ. 2 ಸಾವಿರಕ್ಕೂ ಹೆಕ್ಟೇರ್‌ ಅಧಿಕ ಸೋಯಾ ಅವರೆ, 268 ಹೆಕ್ಟೇರ್ ಶೇಂಗಾ, 1718 ಹೆಕ್ಟೇರ್ ಹತ್ತಿ ಬಿತ್ತನೆಯಾಗಿದೆ. 2675 ಹೆಕ್ಟೇರ್ ಕಬ್ಬು ಬಿತ್ತನೆಯಾಗಿದೆ. 500 ಹೆಕ್ಟೇರ್‌ಗೂ ಅಧಿಕ ಹತ್ತಿ, 5 ಸಾವಿರಕ್ಕೂ ಅಧಿಕ ಹೆಕ್ಟೇರ್ ಗೋವಿನಜೋಳ ಬಿತ್ತನೆ ಮಾಡಿದ್ದು, ಬಹುಪಾಲು ಹಾಳಾಗಿದೆ.

ಸ್ವಲ್ಪ ತಡವಾಗಿ ಬಿತ್ತನೆಯಾಗಿರುವುದು, ತಗ್ಗು ಪ್ರದೇಶದಲ್ಲಿ ಬಿತ್ತನೆಯಾಗಿರುವುದು, ಕೆರೆಗಳ ಕೆಳ ಭಾಗದ ಜಮೀನಿನಲ್ಲಿ ಬಿತ್ತನೆಯಾಗಿರುವ ಗೋವಿನಜೋಳ, ದ್ವಿದಳ ಧಾನ್ಯ, ಹತ್ತಿ ಅತಿಯಾದ ತೇವದಿಂದಾಗಿ ಜವುಗು ಹಿಡಿದು ಹಳದಿಯಾಗಿವೆ. ಉಳಿದಂತೆ ಇರುವ ಈ ಪೈರುಗಳು ಕೂಡ ರೈತ ನಿರೀಕ್ಷಿಸಿದ ಇಳುವರಿ ನೀಡಲಾರವು ಎನ್ನಲಾಗಿದೆ. ನಿರಂತರ ಮಳೆಯಿಂದಾಗಿ ಕೀಟಬಾಧೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈಗ ಮಳೆ ಕಡಿಮೆಯಾಗಿರುವುದರಿಂದ ರೋಗ ಬಾಧೆ, ಕೀಟಬಾಧೆ ಹೆಚ್ಚಬಹುದು.ಜೂನ್, ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚೇನೂ ಮಳೆ ಆಗಿಲ್ಲ. ಆದರೆ ಮಳೆ ಬಿಡುವು ಕೊಡದೇ, ಪೈರಿಗೆ ಬಿಸಿಲು ಸಿಗದೆ ಇರುವುದು, ತಗ್ಗು ಪ್ರದೇಶಗಳಲ್ಲಿ ಬಿತ್ತನೆಯಾಗಿರುವುದು ಕೂಡ ಗೋವಿನಜೋಳ ಬೆಳೆ ಇಳುವರಿಗೆ ಹಿನ್ನಡೆಯಾಗಲಿದೆ. ವಾಡಿಕೆ ಮಳೆ ಎರಡು ತಿಂಗಳಿನಲ್ಲಿ 463 ಮಿಮೀ ಇದೆಯಾದರೂ, ಬಿದ್ದ ಬೆಳೆ ಮಾತ್ರ 332 ಮಿಮೀ ಮಾತ್ರ ಆಗಿದೆ. ಮಳೆ ಹಾಳಾಗಲು ಹೆಚ್ಚು ಮಳೆಯೇ ಕಾರಣವಲ್ಲ. ನಿರಂತರವಾಗಿ ಬಿಡುವಿಲ್ಲದೆ ಬಿದ್ದ ಮಳೆ ಕಾರಣ ಎನ್ನಲಾಗಿದೆ.ಯೂರಿಯಾ ಸಮಸ್ಯೆ ಇಲ್ಲ: ತಾಲೂಕಿನಲ್ಲಿ ಯೂರಿಯಾ ಸಮಸ್ಯೆ ಅಷ್ಟೇನೂ ಆಗಿಲ್ಲ. ಉಳಿದಂತೆ ಯಾವುದೇ ರಾಸಾಯನಿಕ ಗೊಬ್ಬರದ ಕೊರತೆ ಇಲ್ಲ. ಈಗ ನಾಟಿ ಭತ್ತಕ್ಕೆ ಮಾತ್ರ ಹೆಚ್ಚು ಯೂರಿಯಾ ಬೇಕಾಗುತ್ತದೆ. ಅದಕ್ಕಾಗಿ ಹೀಗಾಗಿ ಕೃಷಿ ಇಲಾಖೆ ಯೂರಿಯಾ ಕೊರತೆಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.ತಹಸೀಲ್ದಾರ್ ಘೋಷಣೆ: ಇತ್ತೀಚೆಗೆ ಹಾನಗಲ್ಲಿನಲ್ಲಿ ಜಿಲ್ಲಾ ರೈತ ಸಂಘ ನಡೆಸಿದ ಸಭೆಯಲ್ಲಿ ರೈತ ಸಂಘದ ಮನವಿಯಂತೆ ಒಂದು ವಾರದಲ್ಲಿ ಬೆಳೆಹಾನಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ತಹಸೀಲ್ದಾರ ಎಸ್. ರೇಣುಕಾ ಭರವಸೆ ನೀಡಿದ್ದರು. ಆದರೆ ಈ ವರೆಗೂ ಬೆಳೆಹಾನಿಯ ಪರಿಶೀಲನೆ ನಡೆದಿಲ್ಲ. ರೈತ ಸಂಘಕ್ಕೆ ಏನು ಉತ್ತರಿಸುವರು ಎಂಬ ಪ್ರಶ್ನೆ ಇದೆ. ಆದರೆ ಬಲ್ಲ ಮೂಲಗಳ ಅನ್ವಯ ಸರ್ಕಾರ ಬೆಳೆಹಾನಿ ಪರಿಹಾರಕ್ಕೆ ಯಾವುದೇ ಆದೇಶ ನೀಡಿಲ್ಲ. ಆದೇಶ ಬರುವವರೆಗೂ ಪರಿಶೀಲನೆ ಸಾಧ್ಯವಿಲ್ಲ.ರೋಗ ಹೆಚ್ಚಳದ ಆತಂಕ: ಮಳೆ ಕಡಿಮೆಯಾಗಿದೆ. ಆದರೆ ಬೆಳೆಗಳಿಗೆ ಕೀಟ, ರೋಗಬಾಧೆ ಹೆಚ್ಚಾಗುವ ಸಂದರ್ಭಗಳಿವೆ. ಇದನ್ನು ಗಮನಿಸಿ ಸಕಾಲಕ್ಕೆ ಹತೋಟಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ರೈತರು ಅಗತ್ಯಕ್ಕೆ ಅನುಗುಣವಾಗಿ ನ್ಯಾನೋ ಗೊಬ್ಬರ ಬಳಸುವುದು ಸೂಕ್ತ. ನಮ್ಮ ತಾಲೂಕಿನಲ್ಲಿ ಯಾವುದೇ ಗೊಬ್ಬರದ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ತಿಳಿಸಿದರು.