ಸಾರಾಂಶ
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಂಪತಿ, ಹಿಂದು ಪರ ಸಂಘಟನೆಗಳ ಮುಖಂಡರು ಗೋವುಗಳನ್ನು ಪೂಜಿಸಿದರು.
ಹೊನ್ನಾಳಿ: ಹಿಂದೂಗಳ ಜೀವನ ಪದ್ಧತಿಯಲ್ಲಿ ಗೋವುಗಳು ಧಾರ್ಮಿಕವಾಗಿ ಮಹತ್ತರ ಪಾತ್ರ ವಹಿಸುತ್ತಿವೆ. ಇಂದಿಗೂ ಪ್ರತಿ ಮನೆ ಹಾಗೂ ಮನಗಳಲ್ಲಿ ಗೋಪೂಜೆ ಹಾಗೂ ಗೋಸತ್ಕಾರಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶನಿವಾರ ಪಟ್ಟಣದ ಕೋಟೆ ಶಂಕರ ಮಠದಲ್ಲಿ ತಾಲೂಕು ಗೋರಕ್ಷಾ ಪರಿಷತ್ತು ವತಿಯಿಂದ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸನಾತನ ಧಾರ್ಮಿಕ ಪರಂಪರೆಯಲ್ಲಿ ಹಿಂದಿನ ಋಷಿ-ಮುನಿಗಳು, ಸಂತರು, ಶರಣರು, ದಾರ್ಶನಿಕರು ಗೋಮಾತೆಗೆ ವಿಶೇಷ ಆದ್ಯತೆ ನೀಡಿ, ದೇವಾನುದೇವತೆಗಳ ದೈವಸ್ವರೂಪವೆಂದು ತಿಳಿದು ಆರಾಧಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಸಂಸ್ಕತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಗೋಮಾತೆಯನ್ನು ತಾಯಿಯ ಸ್ವರೂಪದಲ್ಲಿ ನಾವುಗಳೂ ಆರಾಧಿಸುತ್ತಿದ್ದೇವೆ ಎಂದರು.
ಗೋಮಾತೆ ಎನ್ನುವುದು ಜಾತ್ಯತೀತವಾದುದು. ಅದು ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ. ನಮಗೆ ಎಲ್ಲವನ್ನು ನೀಡುವ ಕಾಮಧೇನುವಾಗಿದೆ. ಆರೋಗ್ಯಕ್ಕೆ ಹಾಲು, ಕೃಷಿಗೆ ಗೊಬ್ಬರ, ದುಡಿಮೆ ಹೀಗೆ ಪ್ರತಿಯೊಂದನ್ನು ಗೋವುಗಳು ನೀಡುತ್ತವೆ. ಆದ್ದರಿಂದ ಕೇವಲ ಧಾರ್ಮಿಕ ದೃಷ್ಟಿಯಿಂದ ಗೋವುಗಳ ಸಂರಕ್ಷಣೆ ಆಗಬೇಕು ಎಂಬ ಅರ್ಥವಲ್ಲ. ಬದಲಾಗಿ ಮಾನವೀಯತೆ ದೃಷ್ಠಿಯಿಂದಲೂ ಗೋವುಗಳನ್ನು ಕಂಡು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ದಂಪತಿ, ವಕೀಲ ಎಸ್.ಎನ್. ಪ್ರಕಾಶ್ ದಂಪತಿ ಗೋಪೂಜೆ ನೆರವೇರಿಸಿದರು. ಗೋರಕ್ಷ ಪರಿಷತ್ತು ಮುಖಂಡ, ವಕೀಲ ಉಮಾಕಾಂತ್ ನೇತೃತ್ವದಲ್ಲಿ ಗೋಪೂಜೆ ನಡೆಯಿತು.
ಎಚ್.ಎನ್. ಅರುಣ್‍ಕುಮಾರ್, ಮನೋಹರ್, ಎಸ್.ಎನ್. ಪ್ರಕಾಶ್, ಕುಮಾರ್, ಶಿವಾನಂದ್, ಮಂಜುನಾಥ್ ಇಂಚರ, ಸುಮಾ ರೇಣುಕಾಚಾರ್ಯ ಹಾಗೂ ಇತರರು ಇದ್ದರು.