ಸಾರಾಂಶ
ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ ಚಿಹ್ನೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ನೀಡಿದ ಆಫರ್ ಅನ್ನು ತಿರಸ್ಕಾರ ಮಾಡಿದ್ದಾರೆ.
ರಾಮನಗರ : ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ ಚಿಹ್ನೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ನೀಡಿದ ಆಫರ್ ಅನ್ನು ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯೋಗೇಶ್ವರ್ ರವರು ಜೆಡಿಎಸ್ ಚಿಹ್ನೆ ಅಡಿಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದರು. ಆದರೀಗ ಜೆಡಿಎಸ್ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಲು ನನ್ನ ಬೆಂಬಲಿಗರು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ. ಜೆಡಿಎಸ್ ವರಿಷ್ಠರು ನೀಡಿರುವ ಆಫರ್ ಅನ್ನು ಯೋಗೇಶ್ವರ್ ತಿರಸ್ಕಾರ ಮಾಡಿರುವ ಕಾರಣ ಬಿಜೆಪಿ - ಜೆಡಿಎಸ್ ಮುಖಂಡರು, ಕಾರ್ಯಕರ್ತರು, ರೈತ, ಕನ್ನಡಪರ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ನಿಖಿಲ್ ಕುಮಾರಸ್ವಾಮಿಯವರ ಸ್ಪರ್ಧೆಗೆ ಒತ್ತಡ ಹೆಚ್ಚಾಗಿದೆ. ನಮ್ಮೆಲ್ಲರ ಅಪೇಕ್ಷೆಯೂ ಅದೇ ಆಗಿದೆ ಎಂದರು.
ಚನ್ನಪಟ್ಟಣ ಉಪ ಚುನಾವಣೆ ಎನ್ ಡಿಎ ಅಭ್ಯರ್ಥಿ ಆಯ್ಕೆ ವಿಚಾರವಾಗಿ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಕೋರ್ ಕಮಿಟಿಯಲ್ಲಿ ಸಾಕಷ್ಟು ಚರ್ಚೆ ನಡೆದಿವೆ. ಚನ್ನಪಟ್ಟಣ ಕ್ಷೇತ್ರಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಬೇಕೆಂದು ಬಿಜೆಪಿ ವರಿಷ್ಠರು ತೀರ್ಮಾನ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಮಿತ್ರಪಕ್ಷ ಬಿಜೆಪಿ ನಾಯಕರನ್ನು ಭೇಟಿಯಾಗಿ ಅಭ್ಯರ್ಥಿಯನ್ನು ಅಖೈರು ಮಾಡಲು ನಿರ್ಧರಿಸಲಾಗಿತ್ತು. ಈ ವಿಚಾರವನ್ನು ಯೋಗೇಶ್ವರ್ ಅವರಿಗೂ ತಿಳಿಸಿದ್ದೇವು ಎಂದು ಹೇಳಿದರು.
ಅಲ್ಲದೆ, ಯೋಗೇಶ್ವರ್ ಅವರಿಗೆ ಪ್ರಾಶಸ್ತ್ಯವಾಗಿ ಅವಕಾಶ ನಿಮ್ಮ ಪಾಲಿಗೆ ಬರುತ್ತಿದೆ. ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡುವಂತೆ ಆಫರ್ ನೀಡಿದೆವು. ಆದರೆ, ಯೋಗೇಶ್ವರ್ ರವರು ನಾನು ಹಿಂದೆ ಹೇಳಿದಂತೆ ಜೆಡಿಎಸ್ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲು ಆಗುವುದಿಲ್ಲ. ಇದಕ್ಕೆ ನನ್ನ ಬೆಂಬಲಿಗರು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ. ಅವರು ಏನು ನಿರ್ಧಾರ ಮಾಡುತ್ತಾರೊ ಗೊತ್ತಿಲ್ಲ. ಆದರೆ, ಜೆಡಿಎಸ್ ವರಿಷ್ಠರು ನೀಡಿದ ಅವಕಾಶವನ್ನು ಯೋಗೇಶ್ವರ್ ತಿರಸ್ಕಾರ ಮಾಡಿದ್ದಾರೆ ಎಂದರು.
ಈಗ ನಾವು ನಮ್ಮ ಪಕ್ಷದ ಅಭ್ಯರ್ಥಿ ಯಾರು ಆಗಬೇಕೆಂದು ತೀರ್ಮಾನ ಮಾಡಬೇಕಿದೆ. ನಿನ್ನೆ ಚನ್ನಪಟ್ಟಣದಲ್ಲಿ ಪಕ್ಷದ ಮುಖಂಡರ ಸಭೆ ನಡೆದಿದೆ. ಕುಮಾರಸ್ವಾಮಿ ಹಾಗೂ ಎನ್ ಡಿಎ ಒಕ್ಕೂಟದ ಸ್ನೇಹಿತರು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಉಪಚುನಾವಣೆ ಎದುರಿಸಬೇಕೆಂಬ ಸಲಹೆಗಳು ಬಂದಿವೆ. ಜೆಡಿಎಸ್ ಮತ್ತು ಬಿಜೆಪಿ ವರಿಷ್ಠರು ಸೇರಿ ಅಂತಿಮವಾಗಿ ಯಾರು ಅಭ್ಯರ್ಥಿಯಾಗಬೇಕೆಂದು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಚುನಾವಣೆಗಳಲ್ಲಿ ಗೆದ್ದಾಗ ಮಾತ್ರ ರಾಜಕೀಯ ಲಾಭ ಆಗುತ್ತದೆ ಎಂಬುದು ಸರಿಯಲ್ಲ. ಮಂಡ್ಯ ಸಂಸತ್ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಷಡ್ಯಂತ್ರ ಹಾಗೂ ಹಿತಶತ್ರುಗಳಿಂದಾಗಿ ಸೋಲಾಯಿತು. ಈಗ ಅದೆಲ್ಲವನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಿಖಿಲ್ ಅವರಿಗೆ ಬಂದಿದೆ ಎಂದು ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಲಾರ ಹಾಗೂ ಮಂಡ್ಯ ಸಂಸತ್ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದೇವಲ್ಲ ಎಂದು ಬಿಜೆಪಿ ನಾಯಕರು ವಾದಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಆ ಎರಡು ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ವೋಟಿಂಗ್ ಪರ್ಸೆಂಟೇಜ್ ನೋಡಿದರೆ ಜೆಡಿಎಸ್ ಗಳಿಸಿದ ಮತಗಳನ್ನು ಆಧಾರವಾಗಿಟ್ಟುಕೊಂಡಿಯೇ ಬಿಜೆಪಿ ವರಿಷ್ಠರು ನಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟರು ಎಂದು ಹೇಳಿದರು.
ಯೋಗೇಶ್ವರ್ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೋ ಇಲ್ಲವೊ ನನಗೆ ಗೊತ್ತಿಲ್ಲ. ಆದರೆ, ರಾಜಕೀಯವಾಗಿ ಸೇಫ್ ಆಗಲು ಏನಾದರೂ ತಂತ್ರಗಾರಿಕೆ ಮಾಡುತ್ತಿರಬಹುದು. ಇಂತಹ ಕುತಂತ್ರಗಳೆಲ್ಲ ಕಾಂಗ್ರೆಸ್ ನವರಿಗೆ ಹೊಸದಲ್ಲ. ಯೋಗೇಶ್ವರ್ ಬೇರೆ ರಾಜಕೀಯ ಪಕ್ಷ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದರೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಎಂಬುದನ್ನು ಫಲಿತಾಂಶ ಉತ್ತರಿಸಲಿದೆ ಎಂದು ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಮನಗರ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಕನಕಪುರ ತಾಲೂಕು ಅಧ್ಯಕ್ಷ ಚಿಕ್ಕಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ , ಮಂಜುನಾಥ್ , ರವಿ, ಸುಗ್ಗನಹಳ್ಳಿ ರಾಮಕೃಷ್ಣ, ಜಯಕುಮಾರ್ , ಬೋರೇಗೌಡ, ಮಹದೇವ, ಕೆಂಪರಾಜು ಇದ್ದರು.
‘ದೇವೇಗೌಡ ಮತ್ತು ಕುಮಾರಸ್ವಾಮಿಯವರು ನಿಖಿಲ್ ಸ್ಪರ್ಧೆಗೆ ಒತ್ತಡ ಹೇರುತ್ತಿಲ್ಲ. ಅಲ್ಲದೆ, ನಿಖಿಲ್ ರವರು ಪಕ್ಷ ಸಂಘಟನೆಯ ಜವಾಬ್ದಾರಿ ಹೆಚ್ಚಾಗಿರುವ ಕಾರಣ ಸ್ಪರ್ಧೆಗೆ ಆಸಕ್ತಿ ತೋರುತ್ತಿಲ್ಲ.ಆದರೆ, ಈಗಿನ ಸಂದಿಗ್ಧ ಸಂದರ್ಭದಲ್ಲಿ ನಿಖಿಲ್ ಸ್ಪರ್ಧೆ ಅನಿವಾರ್ಯವಾಗಿದೆ. ಅವರೊಬ್ಬರೇ ಸಮರ್ಥರು ಅಂತ ಬಿಜೆಪಿ - ಜೆಡಿಎಸ್ ಹಾಗೂ ಜನರು ಹೇಳುತ್ತಿದ್ದಾರೆ. ಹಾಗಾಗಿ ನಾವು ನಿಖಿಲ್ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ.’
ಎ. ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ