ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೂ ಸುರಿದ ವರ್ಷಧಾರೆಗೆ ಜನಜೀವನ ತತ್ತರಗೊಂಡಿದೆ.
ಸವಣೂರು ತಾಲೂಕಿನ ಬರದೂರ, ಹಾನಗಲ್ಲ ತಾಲೂಕಿನ ಕಂಚಿನೆಗಳೂರು, ಹಾವೇರಿ ತಾಲೂಕಿನ ತಿಮ್ಮಾಪುರ ಗ್ರಾಮಗಳು ಜಲಾವೃತಗೊಂಡಿದೆ. ಜಲದಿಗ್ಭಂಧನಕ್ಕೆ ಒಳಗಾಗಿದ್ದ ಪಂಡರಾಪುರಕ್ಕೆ ತೆರಳುತ್ತಿದ್ದ 28 ಭಕ್ತರನ್ನು ರಕ್ಷಿಸಲಾಗಿದ್ದು, ಬರದೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಸೋಮವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆ ಜಿಲ್ಲೆಯ ಜನರನ್ನು ನಲಗುವಂತೆ ಮಾಡಿದೆ. ಸವಣೂರು ತಾಲೂಕಿನ ಬರದೂರ ಗ್ರಾಮದ ಹೊರವಲಯದ ಮಠದಲ್ಲಿ ವಾಸ್ತವ್ಯ ಮಾಡಿದ್ದ ಪಂಡರಾಪುರಕ್ಕೆ ಹೊರಟಿದ್ದ ಸುಮಾರು ೨೮ ಭಕ್ತರು ಬಾಜಿರಾಯನ ಹಳ್ಳದ ನೀರು ಭಾರಿ ಪ್ರಮಾಣದಲ್ಲಿ ಮಠದ ಸುತ್ತಲೂ ಆವರಿಸಿದ್ದರಿಂದ ಜಲದಿಗ್ಭಂದನಕ್ಕೆ ಒಳಗಾಗಿದ್ದರು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡು ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಲ್ಲದೇ ಬರದೂರ ಗ್ರಾಮಕ್ಕೆ ಹಳ್ಳದ ನೀರು ಭಾರಿ ಪ್ರಮಾಣದಲ್ಲಿ ನುಗ್ಗಿದ್ದರಿಂದ ಸುಮಾರು ೩೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಮನೆಗಳು ಹಾನಿಗೀಡಾಗಿವೆ. ಮಳೆಯಿಂದಾಗಿ ಅಕ್ಷರಶಃ ತತ್ತರಿಸಿರುವ ಗ್ರಾಮಸ್ಥರು ಕಣ್ಣೀರಿಡುವಂತಾಗಿದೆ. ಗ್ರಾಮಸ್ಥರಿಗೆ ಸ್ಥಳೀಯ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಸ್ಥಳಕ್ಕೆ ತೆರಳಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. ಸೂಕ್ತ ನೆರವಿನ ಭರವಸೆ ನೀಡಿದರು. ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮಕ್ಕೂ ನೀರು ನುಗ್ಗಿದ್ದು ಸುಮಾರು ೫೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಸಿದೆ. ಹಾವೇರಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದಿನಸಿ ನೀರು ಪಾಲಾದ ಘಟನೆ ನಡೆದಿದೆ. ಭಾನುವಾರ ರಾತ್ರಿ ಸಿಡಿಲು ಬಡಿದು ನೂಕಾಪುರ ಗ್ರಾಮದ ಹಾಲೇಶ ಕುಂಬಾರ ಅವರಿಗೆ ಸೇರಿದ ಎತ್ತು ಮೃತಪಟ್ಟಿದೆ.ಮಳೆಯ ಆರ್ಭಟದಿಂದಾಗಿ ಶಿಗ್ಗಾಂವಿ, ಕೋಣನಕೇರಿ ಸಂಪರ್ಕ ರಸ್ತೆ ಬಂದ್ ಆಗಿದೆ. ಸವಣೂರು ತಾಲೂಕಿನ ಮಾದಾಪುರ ಗ್ರಾಮದ ಹೊಲಗದ್ದೆಗಳಿಗೆ ನೀರು ನುಗ್ಗಿ ಗೋವಿನಜೋಳದ ಬೆಳೆ ಜಲಾವೃತಗೊಂಡಿದೆ. ಹಾನಗಲ್ಲ ತಾಲೂಕಿನ ಹೆರೂರು ಗ್ರಾಮದಲ್ಲಿ ನೀರಾವರಿ ಕಾಲುವೆ ಒಡೆದು ಹೊಲಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ. ದಿಡಗೂರ- ಹೆರೂರು, ಹೆರೂರು-ತಿಳುವಳ್ಳಿ ಸಂಪರ್ಕ ರಸ್ತೆ ಬಂದ್ ಆಗಿದೆ. ಶಿಗ್ಗಾಂವಿ ತಾಲೂಕಿನ ಬಂಕಾಪುರ ಹೊರವಲಯದ ನರ್ಸರಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ.
ಹಾವೇರಿಯ ಹೊರವಲಯದ ಹೆಗ್ಗೇರಿ ಕೆರೆ ಸಂಪೂರ್ಣ ಭರ್ತಿಗೊಂಡು ಕೋಡಿ ಬಿದ್ದಿದ್ದರಿಂದ ತೋಟದಯಲ್ಲಾಪುರ ರಸ್ತೆಯಲ್ಲಿರುವ ಮೈಲಾರ ಮಹದೇವ ಸಭಾಭವನ, ಹುತಾತ್ಮ ಯೋಧರ ಸ್ಮಾರಕ ಜಲಾವೃತಗೊಂಡಿದೆ.ಬೆಳೆಗಳು ಜಲಾವೃತ: ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ನಿತ್ಯವೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತರು ಅಕ್ಷರಶಃ ಕಂಗಾಲಾಗುವಂತೆ ಮಾಡಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಶೇಂಗಾ, ಭತ್ತ, ಈರುಳ್ಳಿ, ಸೋಯಾಬಿನ್, ಮೆಣಸಿನಕಾಯಿ ಬೆಳೆಗಳು ಜಲಾವೃತಗೊಂಡು ತೇವಾಂಶದಿಂದ ಕೊಳೆಯುವ ಸ್ಥಿತಿ ಎದುರಾಗಿದೆ. ಇನ್ನೊಂದಡೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ, ಶೇಂಗಾ, ಈರುಳ್ಳಿ, ಸೋಯಾಬಿನ್ ಬೆಳೆಗಳನ್ನು ರೈತರು ಕಟಾವು ಮಾಡಿ ರಾಶಿ ಹಾಕಿದ್ದು, ಮಳೆಯಿಂದಾಗಿ ಕಾಳುಗಳು ರಾಶಿಯಲ್ಲಿಯೇ ಮೊಳಕೆ ಒಡೆದು ಹಾಳಾಗುತ್ತಿವೆ. ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ಈ ಮಳೆಯಿಂದಲೇ ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.