ಸಾರಾಂಶ
ಚಿತ್ರದುರ್ಗ: ಉಪ ಚುನಾವಣೆ ಉಸಾಬರಿ ಬಿಟ್ಟು ಮಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುವಂತೆ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆಯಾಗಿದೆ. ಇತ್ತೀಚಿಗೆ ಸುರಿಯುತ್ತಿರುವ ಹಿಂಗಾರು ಮಳೆಯಿಂದ ಜಿಲ್ಲೆಯ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಅರ್ಧ ಶತಮಾನದಷ್ಟು ಕಾಲದಿಂದಲೂ ತುಂಬದೇ ಇದ್ದ ಕೆರೆಗಳು ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆಯಾದರೂ ಅವಶ್ಯಕತೆಗಿಂತ ಹೆಚ್ಚಿನ ಮಳೆ ರೈತರ ಬದುಕನ್ನು ಅಸ್ತವ್ಯಸ್ತಗೊಳಿಸುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಈ ಬಗ್ಗೆ ರಾಜ್ಯ ಸರ್ಕಾರ ರೈತರ ನೆರವಿಗೆ ಕೂಡಲೇ ಧಾವಿಸಬೇಕಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ಯಾವುದಕ್ಕೆ ಆದ್ಯತೆ ನೀಡಬೇಕೆಂಬುದು ತಿಳಿದಿಲ್ಲ. ಸಮರೋಪಾದಿಯಲ್ಲಿ ಅತಿವೃಷ್ಟಿಯಿಂದಾದ ನಷ್ಟ ಕುರಿತು ಸಮೀಕ್ಷೆ ನಡೆಸಬೇಕಾದ ರಾಜ್ಯ ಸರ್ಕಾರ ಉಪ ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸಚಿವರ, ಶಾಸಕರ ದಂಡನ್ನು ಕಳುಹಿಸಲು ಸಭೆಗಳ ಮೇಲೆ ಸಭೆಗಳನ್ನು ಆಯೋಜಿಸುತ್ತಿದೆ. ಇದೇ ಕೆಲಸವನ್ನು ಅತಿವೃಷ್ಟಿಯಿಂದಾದ ನಷ್ಟ ಸಮೀಕ್ಷೆಗೆ ಸರ್ಕಾರ ಸಚಿವರನ್ನು, ಶಾಸಕರನ್ನು ನಿಯೋಜನೆ ಮಾಡಬಹುದಿತ್ತು. ಅದನ್ನು ಬಿಟ್ಟು ಚುನಾವಣೆಯನ್ನೇ ಪ್ರಥಮ ಆಧ್ಯತೆಯನ್ನಾಗಿಸಿಕೊಂಡಿರುವುದು ರೈತರ ಬಗೆಗಿನ ನಿರ್ಲಕ್ಷ್ಮತೆ ತೋರಿಸುತ್ತದೆ ಎಂದು ಹೇಳಿದ್ದಾರೆ. ಹಿಂಗಾರು ಮಳೆ ಅಬ್ಬರಕ್ಕೆ ರೈತರ ಹೊಲದಲ್ಲೇ ಬೆಳೆಗಳು ಕೊಳೆಯುತ್ತಿವೆ. ಇಳುವರಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ. ರೈತರು ಖರ್ಚು ಮಾಡಿದ ಹಣವನ್ನೂ ಸಹ ವಾಪಾಸ್ಸು ಪಡೆಯಲಾರದಂತಹ ಸ್ಥಿತಿಯಲ್ಲಿದ್ದಾರೆ. ಕಟಾವಿಗೆ ಬಂದ ಬೆಳೆಗಳು ನೀರು ಪಾಲಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲಿಯೇ ಅಕ್ಟೋಬರ್ ತಿಂಗಳಿನಲ್ಲಿ ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ. ಈರುಳ್ಳಿ ಹೊಲದಲ್ಲಿಯೇ ಕೊಳೆತುಹೋಗುತ್ತಿದೆ. ಮೆಕ್ಕೆಜೋಳ ಕಟಾವಿಗೆ ಬಂದಿದ್ದರೂ, ಹೊಲದಲ್ಲಿಯೇ ಮೊಳಕೆಯಾಗುತ್ತಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 2500 ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ ಹಾಗೂ 900 ಕ್ಕೂ ಹೆಚ್ಚು ಮನೆಗಳು ಭಾಗಶ: ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಅತಿವೃಷ್ಟಿ ಸಂತ್ರಸ್ಥರ ನೆರವಿಗೆ ಧಾವಿಸಬೇಕು. ಹಲವು ದಶಕಗಳಿಂದ ತುಂಬಿರುವ ಕೆರೆಕಟ್ಟೆಗಳಲ್ಲಿ ನೀರನ್ನು ಸಂರಕ್ಷಣೆ ಮಾಡುವ ಕಡೆ ಸರ್ಕಾರ ಗಮನ ಹರಿಸಬೇಕಾಗಿದೆ. ಇದಕ್ಕಾಗಿ ಸಣ್ಣ ನೀರಾವರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ ಕೆರೆಗಳ ಸುರಕ್ಷತೆಯ ಬಗ್ಗೆ ವರದಿ ಪಡೆಯಬೇಕು, ನೀರು ಪೋಲಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಕಡೆ ಸರ್ಕಾರ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ. ನಗರ ಹಾಗು ಗ್ರಾಮಾಂತರ ಭಾಗಗಗಳಲಿ ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿವೆ. ಗುಂಡಿ ಮುಚ್ಚಲೂ ಕೂಡ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದೇ ಜನರ ಜೀವದ ಜೊತೆ ಚಲ್ಲಾಟವಾಡುವ ಕೆಲಸಕ್ಕೆ ಸರ್ಕಾರ ಇಳಿದಿದೆ. ಕಳೆದ ಮರ‍್ನಾಲ್ಕು ತಿಂಗಳುಗಳಿಂದ ಮುಡಾ ಹಗರಣ ಮುಚ್ಚಿಹಾಕುವ ಕೆಲಸ ಈಗ ಉಪಚುನಾವಣೆಯ ಕೆಲಸದಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರಕ್ಕೆ ಉಪಚುನಾವಣೆ ಮುಖ್ಯವೋ ಅಥವಾ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವುದು ಮುಖ್ಯವೋ ಎಂಬುದನ್ನು ಸ್ಪಷ್ಟಪಡಿಸಲಿ. ಅತಿವೃಷ್ಟಿಯಿಂದ ಆಗಿರುವ ನಷ್ಟಕ್ಕೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಬದ್ಧತೆ ಹಾಗೂ ಮಾನವೀಯತೆಯನ್ನು ಮೆರೆಯಲಿ ಎಂದು ಆಗ್ರಹಿಸಿದ್ದಾರೆ.