ವೃತ್ತ ನಿರೀಕ್ಷಕಿ ಗಾಯತ್ರಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ, ನಿಂದನೆ ಖಂಡಿಸಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.

- ವೃತ್ತ ನಿರೀಕ್ಷಕಿ ಗಾಯತ್ರಿ, ಸಿಬ್ಬಂದಿ ಹರೀಶ, ಕೆಂಚಪ್ಪ ಬೆನ್ನಿಗೆ ಪೊಲೀಸ್ ಇಲಾಖೆಗೆ ನಿಲ್ಲಲಿ: ಒಕ್ಕೂಟ ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೃತ್ತ ನಿರೀಕ್ಷಕಿ ಗಾಯತ್ರಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ, ನಿಂದನೆ ಖಂಡಿಸಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.

ನಗರದ ಹೈಸ್ಕೂಲ್ ಮೈದಾನದಿಂದ ಒಕ್ಕೂಟದ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆಗೆ ತೆರಳಿದ ಸಮಾಜ ಬಾಂಧವರು, ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅಲ್ಲಿ ಸಿಪಿಐ ಗಾಯತ್ರಿ ಅ‍ವರಿಗೆ ನೈತಿಕ ಸ್ಥೈರ್ಯ ಮೂಡಿಸಿ, ಅಲ್ಲಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಅರ್ಪಿಸಿ, ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಒಕ್ಕೂಟದ ಮುಖಂಡರು ಈ ವೇಳೆ ಮಾತನಾಡಿ, 2 ಗುಂಪುಗಳ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ತೆರಳಿದ್ದ ಮಹಿಳಾ ವೃತ್ತ ನಿರೀಕ್ಷಕಿ ಗಾಯತ್ರಿ ಹಾಗೂ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳ ಮೇಲೆ ಆರೋಪಿಗಳು ಹಲ್ಲೆ ಮಾಡಿ, ನಿಂದನೆ ಮಾಡಿರುವುದು ಅಕ್ಷಮ್ಯ. ಕರ್ತವ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನೂ ತಕ್ಷಣ ಬಂಧಿಸಿ, ಜೈಲಿಗೆ ಕಳಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ನೇಕಾರ ಸಮುದಾಯ ಹಾಗೂ ಹಿಂದುಳಿದ ವರ್ಗಗಳು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಿಮ್ಮನಕಟ್ಟೆ ಪದ್ಮಶಾಲಿ ಗುರುಪೀಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಎನ್‌.ಕಾಕಿ, ಪ್ರೊ.ಎಲ್.ಸತ್ಯನಾರಾಯಣ, ಡಿ.ಬಸವರಾಜ ಗುಬ್ಬಿ, ಗಿರಿ ಮಲ್ಲೇಶ, ಎಸ್‌ಓಜಿ ಕಾಲನಿ ಕೆ.ಹನುಮಂತಪ್ಪ, ಅಕ್ಕಿ ರಾಮಚಂದ್ರ, ಡಿ.ಜಿ.ಶ್ರೀನಿವಾಸ ಚಿನ್ನಿಕಟ್ಟೆ, ತಿಪ್ಪೇಸ್ವಾಮಿ, ಶ್ರೀನಿವಾಸ, ಸಾಕಮ್ಮ, ಸವಿತಾ ರವಿಕುಮಾರ, ಬಿ.ಬೊಮ್ಮತಿಪ್ಪೇಶ, ರಾಮಚಂದ್ರ, ಎಸ್.ದುಗ್ಗಪ್ಪ, ರಾಮಚಂದ್ರ, ಎಸ್.ವೆಂಕಟೇಶ, ಮಂಜುನಾಥ, ಆರ್‌.ಕುಶ, ಎಸ್.ಸಿದ್ದೇಶ, ದ್ವಾರಕೇಶ, ಎಲ್.ಹನುಮಂತಪ್ಪ, ಆರ್.ಶಂಕರ, ಬಿಜೆಪಿ ಮುಖಂಡ ಟಿಂಕರ್ ಮಂಜಣ್ಣ ಇತರರು ಇದ್ದರು.

- - -

(ಕೋಟ್‌) ಪ್ರಾಮಾಣಿಕ ಅಧಿಕಾರಿ ಗಾಯತ್ರಿ ಹಿಂದುಳಿದ ನೇಕಾರ ಸಮುದಾಯಕ್ಕೆ ಸೇರಿದವರು. ಹಿಂದುಳಿದ ವರ್ಗಗಳ ಇಂತಹ ಅಧಿಕಾರಿಯ ಧೈರ್ಯ, ಕರ್ತವ್ಯಪ್ರಜ್ಞೆ ಇತರರಿಗೂ ಪ್ರೇರಣೆಯಾಗಲಿ. ಮಹಿಳಾ ಸಿಪಿಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಯಾದರೆ, ಜನಸಾಮಾನ್ಯರ ರಕ್ಷಣೆ ಹೇಗೆ ಸಾಧ್ಯ ಎಂಬುದಕ್ಕೆ ರಾಜ್ಯ ಸರ್ಕಾರವೇ ಉತ್ತರಿಸಬೇಕು. ಈ ಘಟನೆಯಿಂದ ಇಡೀ ದಾವಣಗೆರೆ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

- ಸಂಘಟನೆಗಳ ಮುಖಂಡರು, ದಾವಣಗೆರೆ.

- - -

-3ಕೆಡಿವಿಜಿ3.ಜೆಪಿಜಿ: ಸಿಪಿಐ ಗಾಯತ್ರಿ, ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ, ನಿಂದನೆ ಖಂಡಿಸಿ ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. -3ಕೆಡಿವಿಜಿ5: ಸಿಪಿಐ, ಪೊಲೀಸರ ಮೇಲಿನ ಹಲ್ಲೆ, ನಿಂದನೆ ಖಂಡಿಸಿ ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟಿಸಿ, ಸಿಪಿಐ ಗಾಯತ್ರಿ ಅವರಿಗೆ ನೈತಿಕ ಸ್ಥೈರ್ಯ ಮೂಡಿಸಿದರು.