ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕಾಮಗಾರಿ ಮುಗಿದು 2 ವರ್ಷವಾದರೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇಎಸ್‌ಐ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಯಾಗಿಲ್ಲ. ಕಾರ್ಮಿಕರ ಇಎಸ್‌ಐ, ಪಿಎಫ್‌ಗಳ ವೇತನ ಮಿತಿ ತೆಗೆಯಲು ಆಗ್ರಹಿಸಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಜಿಲ್ಲಾ ಸಿಪಿಐ(ಎಂ)ಪಕ್ಷ ನವೆಂಬರ್ 19ರಂದು ಪ್ರತಿಭಟನೆಗೆ ಮುಂದಾಗಿದೆ.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಕಾರ್ಮಿಕರ ಹೋರಾಟದ ಫಲವಾಗಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಆರೆಹಳ್ಳಿ ಗುಡ್ಡದಹಳ್ಳಿಯ ಅಪೆರಲ್ ಪಾರ್ಕ್ ಎರಡನೇ ಹಂತದಲ್ಲಿ 100 ಹಾಸಿಗೆಗಳ ಸಾಮರ್ಥ್ಯವಿರುವ ಮಲ್ಟಿ ಸ್ಪೆಷಾಲಿಟಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಿದೆ.
ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಗಣ್ಯರು 2 ವರ್ಷಗಳಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆದರೆ 11 ವರ್ಷಗಳು ಕಳೆದರೂ ಸಹ ಉದ್ಘಾಟನೆಯಾಗದಿರುವುದು ವಿಷಾದನೀಯ. ಇಎಸ್‌ಐ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಉದ್ಘಾಟನೆ ಮಾಡಿ, ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸೇವೆ ಒದಗಿಸಲಿ ಎಂದು ಆಗ್ರಹಿಸಿದರು.ಮುಖಂಡರಾದ ಪಿ.ಎ.ವೆಂಕಟೇಶ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಮಿಕರು ಅನಾರೋಗ್ಯದ ಸಂದರ್ಭಗಳಲ್ಲಿ ಬೆಂಗಳೂರು ನಗರಕ್ಕೆ ಅಲೆಯುವಂತಾಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿರುವ ಹಣ ಕಾರ್ಮಿಕರ ಸಂಬಳದಲ್ಲಿ, ಪ್ರತಿ ತಿಂಗಳು ಕಡಿತ ಮಾಡುವ ಹಣ, ಸರ್ಕಾರ ಇದಕ್ಕಾಗಿ ಬಿಡಿಗಾಸು ಸಹ ವೆಚ್ಚ ಮಾಡುವುದಿಲ್ಲ. ಆಸ್ಪತ್ರೆ ನಿರ್ಮಾಣ ಕಾರ್ಯವು ಮುಗಿದು ಎರಡು ವರ್ಷ ಕಳೆದರೂ ಸಹ ಇನ್ನೂ ಉದ್ಘಾಟನೆಯಾಗಿಲ್ಲ ಎಂದರು.
ಸರ್ಕಾರ ರೂಪಿಸಿರುವ ನೂತನ ಕಾಯ್ದೆಯಲ್ಲಿ ಕಾರ್ಮಿಕರ ವೇತನ ₹21 ಸಾವಿರ ದಾಟಿದರೆ ಇಎಸ್ಐ ಸೌಲಭ್ಯದಿಂದ ವಂಚಿತರಾಗುತ್ತಾರೆ, ಈ ಬೆಲೆ ಏರಿಕೆಯ ಸಂದರ್ಭದಲ್ಲಿ ಆರೋಗ್ಯದ ವೆಚ್ಚ ದುಬಾರಿಯಾಗಿದೆ. ಆದ್ದರಿಂದ ಕಾರ್ಮಿಕರ ವೇತನದ ಮಿತಿ ತೆಗೆಯಬೇಕು. ಎಲ್ಲಾ ಕಾರ್ಮಿಕರಿಗೂ ಆರೋಗ್ಯಸೇವೆ ಸಿಗಬೇಕು. ಈ ಎಲ್ಲಾ ಬೇಡಿಕೆಗಳ ಈಡೆರಿಕೆಗಾಗಿ ನ.19ರಂದು ಜಿಲ್ಲಾಡಳಿತರ ಕಚೇರಿ ಮುಂಭಾಗದಲ್ಲಿ ಕಾರ್ಮಿಕರು ಪ್ರತಿಭಟನೆ ಮಾಡುವುದ್ದಾಗಿ ಹೇಳಿದರು.ಪಕ್ಷದ ಮುಖಂಡರಾದ ಪ್ರಭಾ ಬೆಳವಂಗಲ ಮಾತನಾಡಿ, ಜಿಲ್ಲೆಯಲ್ಲಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ, ಕೃಷಿ ಭೂಮಿಯನ್ನು ರೈತರಿಗೆ ಉಳಿಸುವ ನಿಟ್ಟಿನಲ್ಲಿ ಹಾಗೂ ವಸತಿಹೀನರಿಗೆ ವಾಸಯೋಗ್ಯ ಖಾಯಂ ಮನೆಗಳನ್ನು ಕಟ್ಟಿಸಿಕೊಡಲು ಒತ್ತಾಯಿಸಿ ತಾಲೂಕಿನ ಎಸಿ ಕಚೇರಿ ಮುಂಭಾಗ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ. ಸಿಪಿಐ(ಎಂ) ಪಕ್ಷವು ಸದಾ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ, ಅಂಗನವಾಡಿ ನೌಕರರಿಗೆ, ಆಟೋ ಚಾಲಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಕಟ್ಟಡ ಕಾರ್ಮಿಕರಿಗೆ, ನೇಕಾರರಿಗೆ ಸೇರಿದಂತೆ ಇನ್ನೂ ಮುಂತಾದ ವಿಭಾಗಗಳಲ್ಲಿ ದುಡಿಯುವ ಕಾರ್ಮಿಕರ ಧ್ವನಿಯಾಗಿ ಶ್ರಮಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಆರ್.ಚಂದ್ರ ತೇಜಸ್ವಿ, ಎಸ್. ರುದ್ರರಾಧ್ಯ, ಪ್ರಭಾ ಬೆಳವಂಗಲ, ವೆಂಕಟರಾಜು, ಪಿ.ಎ. ವೆಂಕಟೇಶ್ ಉಪಸ್ಥಿತರಿದ್ದರು.