ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಪೊಲೀಸ್ ಇಲಾಖೆಯಲ್ಲಿನ ಅಪರಾಧಿಕ ಪ್ರಕರಣಗಳನ್ನು ಭೇದಿಸುವ ತನಿಖೆ ಮಾಡುವ ವಿಧಾನ ಹಾಗೂ ಕಾನೂನು ಜರುಗಿಸುವ ಕುರಿತು ಬೆಳಗಾವಿಯಲ್ಲಿ ನಡೆದ ಪೊಲೀಸ್ ಕರ್ತವ್ಯ ಕೂಟದಲ್ಲಿ ಇಂಡಿ ಪೊಲೀಸ್ ವೃತ್ ನಿರೀಕ್ಷಕ ಎಂ.ಎಂ.ಡಪ್ಪಿನ ಅವರು 6 ಚಿನ್ನದ ಪದಕಗಳನ್ನು ಪಡೆಯುವುದರ ಮೂಲಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ್ದು ಶ್ಲಾಘನೀಯವಾದದ್ದು ಎಂದು ಅಹಿಂದ ಮುಖಂಡ ಜಟ್ಟೆಪ್ಪ ರವಳಿ ಹೇಳಿದರು.ಪಟ್ಟಣದ ಸಿಪಿಐ ಕಚೇರಿಯಲ್ಲಿ 6 ಚಿನ್ನದ ಪದಕಗಳನ್ನು ಪಡೆದುಕೊಂಡಿರುವ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಅವರಿಗೆ ತಾಲೂಕಿನ ಅಹಿಂದ ಸಂಘಟನೆಯ ಪರವಾಗಿ ಬುಧವಾರ ಸನ್ಮಾನಿ ಮಾತನಾಡಿದ ಅವರು, ಪೊಲೀಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳಬೇಕಾದ ವೈಜ್ಞಾನಿಕ ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ, ಬೆರಳಚ್ಚು ತನಿಖೆ ವೈಜ್ಞಾನಿಕ ತನಿಖೆ, ವಿಧಿ ವಿಜ್ಞಾನ, ಪಾದದಮುದ್ರೆ, ಫೋಟೋ, ವಿಡಿಯೋಗ್ರಫಿ, ಶ್ವಾನದಳ, ಪೊಲೀಸ್ ವೃತ್ತಿಪರ ತನಿಖೆ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯಲ್ಲಿ (ಸ್ಪರ್ಧೆಯಲ್ಲಿ ) ಸಿಪಿಐ ಎಂ.ಎಂ.ಡಪ್ಪಿನ ಅತ್ಯುತ್ತಮವಾಗಿ ತಮ್ಮ ಸಾಧನೆ ಪ್ರಟಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದು, ಇಲಾಖೆಗೆ ಗೌರವ ಹೆಚ್ಚಿಸಿದಲ್ಲದೆ ಇಂಡಿ ತಾಲೂಕಿಗೆ ಗೌರವ ತಂದು ಕೊಟ್ಟಿದ್ದಾರೆ. ದಕ್ಷ ಅಧಿಕಾರಿಯಾಗಿರುವ ಡಪ್ಪಿನ ಅವರು ಜನಪರವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಅವರ ಕರ್ತವ್ಯ ನಿಷ್ಠೆ ಇತರರಿಗೆ ದಾರಿದೀಪವಾಗಲಿ ಎಂದು ತಿಳಿಸಿದರು.
ಪೊಲೀಸ್ ಇಲಾಖೆಗೆ ಸೇರಿ ಕಾನೂನಿನ ಚೌಕಟ್ಟಿನಲ್ಲಿ, ಮಾನವೀಯ ನೆಲೆಯಲ್ಲಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇವರು, ಪೊಲೀಸ್ ಇಲಾಖೆಯಲ್ಲಿ ಅಪಾರ ಅನುಭವ ಹೊಂದಿದ್ದು, ಅವರ ಸೇವೆ ಭೀಮಾತೀರದ ಸಾರ್ವಜನಿಕರ ನೆಮ್ಮದಿಗೆ ಸಹಕಾರಿಯಾಗಲಿ ಎಂದರು.ಈ ಸಂದರ್ಭದಲ್ಲಿ ಪ್ರಶಾಂತ ಕಾಳೆ, ಮಹಿಬೂಬ್ ಅರಬ, ಹಿಂಗಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಸದಾಶಿವ ಪ್ಯಾಟಿ, ಧರ್ಮರಾಜ ವಾಲಿಕಾರ, ಇಲಿಯಾಸ್ ಬೊರಾಮಣಿ, ರುಕ್ಮುದ್ದಿನ್ ತದ್ದೇವಾಡಿ, ಜಬ್ಬಾರ ಅರಬ, ಭೀಮಣ್ಣ ಕವಲಗಿ, ಮಲ್ಲಿಕಾರ್ಜುನ ನಡಗಡ್ಡಿ, ರಾಜು ಹಿರೇಬೇವನೂರ ಮೊದಲಾದವರು ಇದ್ದರು.