ಕಾರ್ಮಿಕರ ಆರನೇ ಗ್ಯಾರಂಟಿ ಯೋಜನೆ ಜಾರಿಗೆ ಒತ್ತಾಯಿಸಿ ಸಿಪಿಐ ಪ್ರತಿಭಟನೆ
2 Min read
KannadaprabhaNewsNetwork
Published : Oct 08 2023, 12:00 AM IST
Share this Article
FB
TW
Linkdin
Whatsapp
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಿಪಿಐ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. | Kannada Prabha
Image Credit: KP
ಕಾರ್ಮಿಕರ ಆರನೇ ಗ್ಯಾರಂಟಿ ಯೋಜನೆ ಜಾರಿಗೆ ಒತ್ತಾಯಿಸಿ ಸಿಪಿಐ ಪ್ರತಿಭಟನೆ
ಕಳೆದ ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಿವೇಶನವಿಲ್ಲದೇ ವಸತಿ ಸಮಸ್ಯೆ ಎದುರಿಸುತ್ತಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ದ ನೇತೃತ್ವದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧಾ ಸುಂದ್ರೇಶ್, ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ನಿವೇಶನವಿಲ್ಲದೇ ಸಮಸ್ಯೆ ಎದುರಿಸುತ್ತಿವೆ. ಚುನಾವಣಾ ಪೂರ್ವ ದಲ್ಲಿ ನೀಡಿದಂತಹ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸುವ ಮೂಲಕ ಜನರ ನೈಜ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಮನೆಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದು, ಆ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರಾಗಿ ಘೋಷಿಸಿದ್ದ ಆರನೇ ಗ್ಯಾರಂಟಿಯನ್ನು ಜಾರಿ ಗೊಳಿಸಬೇಕು ಎಂದರು. ಸರ್ಕಾರವೇ ಘೋಷಿಸಿದಂತೆ ಆರನೇ ಗ್ಯಾರಂಟಿಯನ್ನು ಅಸಂಘಟಿತ ಕಾರ್ಮಿಕರಾದ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ 6 ಸಾವಿರ ಗೌರವಧನ ಹೆಚ್ಚಿಸಬೇಕು. ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ಯುಜಿಡಿ ಸೌಲಭ್ಯ ಒದಗಿಸಲು ಕೋಟಿಗಟ್ಟಲೇ ಹಣ ಖರ್ಚಾಗಿದೆ. ಆದರೂ ಸಮರ್ಪಕ ಕಾಮಗಾರಿ ಪೂರೈಸಿಲ್ಲ. ಮೇಲ್ನೋಟಕ್ಕೆ ಗಮನಿಸಿದರೆ ಬಹಳಷ್ಟು ಅನುದಾನ ದುರುಪಯೋಗವಾಗಿದೆ ಎನ್ನಲಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರಿಂದ ಉನ್ನತ ಮಟ್ಟದ ತನಿಖೆ ನಡೆಸಿ ಕಾಮಗಾರಿ ಪೂರ್ಣ ಗೊಳಿಸಬೇಕು ಎಂದರು. ನಗರ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆ ನಿವೇಶನ ಇಲ್ಲದವರಿಗೆ ಫ್ಲಾಟ್ ಕೊಡುವುದಾಗಿ ಜನರಿಂದ ಹಣ ಹಾಗೂ ಅರ್ಜಿ ತೆಗೆದುಕೊಂಡಿದ್ದು ಇದುವರೆಗೂ ನೀಡಿಲ್ಲ. ಫ್ಲಾಟ್ ಒದಗಿಸಲು ಬದಲು ನಿವೇಶನ ಒದಗಿಸಬೇಕು. ರಾಜ್ಯದ ಪೌರಕಾರ್ಮಿಕರ ಸೇವೆ ಖಾಯಂಗೊಳಿಸಿ ಸರ್ಕಾರ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಸಿಪಿಐ ಸಂಪೂರ್ಣ ಬೆಂಬಲ ಸೂಚಿಸಿತ್ತು. ಇದೀಗ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಗಮನಹರಿಸಬೇಕು. ಭರವಸೆಯಂತೆ ಆರನೇ ಗ್ಯಾರಂಟಿ ಘೋಷಿಸುವ ಮೂಲಕ ಕಾರ್ಮಿಕರ ಸಮುದಾಯಕ್ಕೆ ಸಹಾಯಹಸ್ತ ಚಾಚಬೇಕು ಎಂದರು. ರಾಜ್ಯದ ಬಹಳ ಕಡೆಗಳಲ್ಲಿ ಕಾಡು ಪ್ರಾಣಿಗಳಿಂದ ರೈತರು, ಕಾರ್ಮಿಕರು ತೊಂದರೆ ಅನುಭವಿಸಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಅರಣ್ಯ ಇಲಾಖೆ. ಕಾಡಿನಲ್ಲಿ ಹಣ್ಣಿನ ಗಿಡಗಳು, ಬಿದಿರು ಬೆಳೆಸದೇ ಅಕೇಶಿಯಾ, ತೇಗದ ಮರಗಳನ್ನು ಬೆಳೆಯುತ್ತಿರುವುದರಿಂದ ಪ್ರಾಣಿಗಳಿಗೆ ಆಹಾರ ದೊರಕದಂತೆ ನಾಡಿನತ್ತ ಧಾವಿಸುವಂತಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಮಂಡಳಿ ಸದಸ್ಯ ವಸಂತ್‌ಕುಮಾರ್, ತಾಲೂಕು ಕಾರ್ಯದರ್ಶಿ ರಮೇಶ್ ಕೆರೆಮಕ್ಕಿ, ಸಹ ಕಾರ್ಯದರ್ಶಿ ಯಡದಾಳು ಕುಮಾರ್, ಮುಖಂಡರಾದ ಮಂಜೇಗೌಡ, ವಿಜಯ್ ಕುಮಾರ್, ಸೋಮೇಗೌಡ, ಲೋಬೋ, ವಿಜಯನಂದ್, ಜಯಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. 7 ಕೆಸಿಕೆಎಂ 2 ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಿಪಿಐ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.