ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಸೇರಿದಂತೆ ಈ ಬಾಗದ 7 ಜಿಲ್ಲೆಯಾದ್ಯಂತ ಮಳೆಯಿಂದಾಗಿ ವಿಪರೀತ ಹಾನಿಯಾಗಿದೆ. ಬೆಳೆ, ಮನೆಗಳು, ರಸ್ತೆ, ಬಡವರ ಮನೆಯಲ್ಲಿ ಶೇಖರಿಸಿಟ್ಟ ದವಸ-ಧಾನ್ಯಗಳು, ಶಾಲೆಯ ಕಟ್ಟಡಗಳು ಹೀಗೆ ವಿಪರೀತವಾಗಿ ಉಂಟಾದ ಸಾರ್ವಜನಿಕ ಹಾನಿಯನ್ನು ಸರ್ಕಾರ ಸಮಗ್ರ ಆಯಾಮದಿಂದ ಸಮೀಕ್ಷೆ ಮಾಡಲು ಸಾಧ್ಯವಾಗಬೇಕು. ಮಳೆಯ ಕಾರಣದಿಂದ ಮಾನವಶ್ರಮವು ಬಳಕೆಯಾಗದ ಕಾರಣಕ್ಕಾಗಿ ಉಂಟಾದ ಆದಾಯದ ಹಾನಿಯನ್ನೂ ಸಮೀಕ್ಷೆಯಲ್ಲಿ ಒಳಗೊಳ್ಳಬೇಕು.ಆದರೆ, ಸರ್ಕಾರವು ಬೆಳೆ ಹಾನಿ ಮಾತ್ರ ಪರಿಗಣಿಸಿದೆ. ರಸ್ತೆಗಳು ಕಿತ್ತು ಹೋಗಿದ್ದು, ಸರಕು ಮತ್ತು ಸಾರಿಗೆ ಸಂಪರ್ಕದಲ್ಲಿ ತೀವ್ರ ವ್ಯತ್ಯಯವಾಗಿದೆ. ನಗರಗಳಿಗೆ ಸಾಗಿಸುವ ತರಕಾರಿ, ಹಾಲು ಎಲ್ಲವೂ ನಿಯಮಿತವಾಗಿ ದೊರೆಯದಂತಾಗಿದೆ. ಜಾನುವಾರು ಕೊಚ್ಚಿ ಹೋಗಿವೆ. ಆದ್ದರಿಂದ, ಕಲ್ಯಾಣ ಕರ್ನಾಟಕವನ್ನು ಹಸಿಬರ ಎಂದು ಘೋಷಿಸಲು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕವನ್ನು ಹಸಿಬರ ಎಂದು ಘೋಷಿಸಿ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿನ ಸಮಿತಿಯ ಮೂಲಕ ವಿಶೇಷ ಅನುದಾನ ಒದಗಿಸಲು ಸಾಧ್ಯವಾಗಬೇಕು. ಬೆಳೆ ಹಾನಿಗೆ ಒಳಗಾದ ಪ್ರತಿ ಎಕರೆಗೆ ರೂ.25,000 ಪರಿಹಾರ ಧನಸಹಾಯ ಮಾಡಲು ಸಾಧ್ಯವಾಗಬೇಕು. ಮಳೆ ಅತಿವೃಷ್ಟಿಯಿಂದಾಗಿ ಉಂಟಾದ ಇತರೆ ಹಾನಿಯನ್ನು ಸಮೀಕ್ಷೆ ನಡೆಸಿ ಪುನರ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.ರಸ್ತೆ, ಶಾಲಾ ಕಟ್ಟಡಗಳು, ಮನೆಗಳು ಇತ್ಯಾದಿ ಜಾನುವಾರು ಸಮೀಕ್ಷೆ ನಡೆಸಿ ವಾಸ್ತವದ ಬೆಲೆಗೆ ತಕ್ಕಂತೆ ಪರಿಹಾರ ವಿತರಿಸಬೇಕು. ಕೆಲವು ದೊಡ್ಡ ಗ್ರಾಮಗಳಲ್ಲಿ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಲಾರದ ಕಾರಣದಿಂದ ತೀವ್ರ ತೊಂದರೆಯಾಗಿದೆ. ಆಳಂದ ತಾಲೂಕಿನ ಜಿಡಗಾ ಗ್ರಾಮದ ಸಮಸ್ಯೆ. ಅಂತಹ ಕಡೆಗಳಲ್ಲಿ ಕೂಡಲೇ ಒಳಚರಂಡಿ ನಿರ್ಮಾಣ ಮಾಡಲು ಸಾಧ್ಯವಾಗಬೇಕು. ಮನೆಗಳು ಎಲ್ಲೆಲ್ಲಿ ಕುಸಿದು ಹೋಗಿವೆಯೋ ಅಲ್ಲೆಲ್ಲ ಹೊಸ ಮನೆಗಳ ನಿರ್ಮಾಣ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮಳೆಯ ಕಾರಣದಿಂದ ಕೆಲಸಕ್ಕಾಗಿ ಹೊರಗೆ ಹೋಗದಂತಾಗಿದೆ. ಮಳೆ ಕಾರಣದಿಂದ ಮಾನವ ದಿನಗಳು ಶೂನ್ಯವಾಗಿವೆ. ಇದರಿಂದಾಗಿ ಶ್ರಮಿಕರ ದಿನಗೂಲಿಯೂ ದೊರೆಯದಂತಾಗಿದೆ ಎಂದು ನೀಲಾ ಕಳವಳ ವ್ಯಕ್ತಪಡಿಸಿದರು.