ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರ ವ್ಯಾಪ್ತಿಯ ಬಡವರು ನಿವೇಶನಕ್ಕಾಗಿ 2015ರಲ್ಲಿ ಸಲ್ಲಿಸಿದ್ದ 8000 ಅರ್ಜಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ಪ್ರಸ್ತುತ ಆನ್ ಲೈನ್ ತಂತ್ರಾಂಶಗಳ ಮೂಲಕ ಅರ್ಜಿ ಸಲ್ಲಿಸಲು ಜು. 15ರ ಗಡುವು ವಾಪಾಸ್ ಪಡೆದು ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ (ಸಿಪಿಎಂ) ಹೊಸಪೇಟೆ ತಾಲೂಕು ಸಮಿತಿಯಿಂದ ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ನಗರದ ಎಸ್ಸಿ, ಎಸ್ಟಿ, ಒಬಿಸಿ ಬಡಜನರು ನಿವೇಶನಕ್ಕಾಗಿ 2015ರಲ್ಲಿ 8000ಕ್ಕೂ ಅಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಂದಿನ ಪೌರಾಯುಕ್ತರು ಅರ್ಜಿಗಳಿಗೆ ಶೀಲ್ (ಮೊಹರು) ಹಾಕಿ ಜನರಿಗೆ ಭರವಸೆ ನೀಡಿದ್ದರು. ಆದರೆ 10 ವರ್ಷ ಕಳೆದರೂ ನಗರಸಭೆ ಕೊಟ್ಟ ಭರವಸೆ ಈಡೇರಿಸದೇ ಬಡ ಜನರಿಗೆ ವಂಚಿಸಿದೆ. ಇದರಿಂದಾಗಿ ಜನರಿಗೆ ಆಡಳಿತದ ಮೇಲೆ ನಂಬಿಕೆ ಕಳೆದು ಹೋಗಿದೆ. ಸಿಪಿಎಂ ತೀವ್ರತರ ಹೋರಾಟದ ಮೂಲಕ ಶಾಸಕ ಗವಿಯಪ್ಪನವರಿಗೆ ಮನವಿ ಕೂಡ ಸಲ್ಲಿಸಿದೆ. ಶಾಸಕರು ಮಾತ್ರ ಸ್ವಂತ ಪ್ರಯತ್ನ ಮಾಡದೇ ಕೇಂದ್ರ ಸರ್ಕಾರದ ಪಿಎಂವೈ ಯೋಜನೆ ಅಡಿಯಲ್ಲಿ ಅಪಾರ್ಟ್ ಮೆಂಟ್ ಮನೆಗಳ ಜಿಪ್ಲಸ್2 ರೂಪದಲ್ಲಿ ಮನೆಗಳನ್ನು ನೀಡಲು ಮುಂದಾಗಿರುವುದು ಅಸಂಬದ್ಧವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನಗರದ ಸುತ್ತಮುತ್ತ ನೂರಾರು ಎಕರೆ ಸರ್ಕಾರಿ ಜಮೀನು ಇದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರು, ಜಿಲ್ಲಾಧಿಕಾರಿ, ನಗರಸಭೆಗೆ ದಾಖಲೆ ಸಮೇತ ಸಿಪಿಎಂ ಪಕ್ಷ ಮಾಹಿತಿ ಒದಗಿಸಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ನಗರದ ಬಿಸಿನೆಸ್ ಮ್ಯಾನ್ ಗಳಿಗೆ ಸಾರ್ವಜನಿಕ ಆಸ್ತಿಗಳಾದ ಜಮೀನುಗಳನ್ನು ಅತಿ ಕಡಿಮೆ ಬೆಲೆಗೆ ನೀಡಲು ಮುಂದಾಗಿದ್ದಾರೆ. ಇದನ್ನು ಸಿಪಿಎಂ ಖಂಡಿಸಲಿದ್ದು, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿರುವ ನಗರಸಭೆಯ ಮಾನದಂಡಗಳು ನಿವೇಶನ ರಹಿತರಿಗೆ ಸಮಸ್ಯೆಯಾಗಿದೆ. ಪಡಿತರ ಚೀಟಿ ಇರುವ ಮಹಿಳಾ ಫಲಾನುಭವಿಗಳಿಗೆ ಸಿಮೀತಗೊಳಿಸಿದ ಕಾರಣದಿಂದ ಹಲವಾರು ಕುಟುಂಬಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್ ಸೆಂಟರ್ ಒಂದು ಅರ್ಜಿಗೆ ₹200 ತೆಗೆದು ಕೊಳ್ಳುತ್ತಿದ್ದಾರೆ. ಇದರಿಂದ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಬಡವರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಹೆಚ್ಚು ಸುಲಿಗೆ ತಡೆಯಲು ಜಂಟಿ ಸಭೆ ನಡೆಸಿ ಶುಲ್ಕ ನಿಗದಿಪಡಿಸಿದರೆ ಅನುಕೂಲವಾಗುತ್ತದೆ ಹಾಗೂ ಅರ್ಜಿ ಸಲ್ಲಿಸಲು ಸೂಚಿಸಿರುವ ಗಡುವು ವಾಪಸ್ ಪಡೆದು ಸಮಯಾವಕಾಶದ ವಿಸ್ತರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: 2015ರಲ್ಲಿ ನಿವೇಶನಕ್ಕಾಗಿ ಸಲ್ಲಿಸಲಾದ 8000 ಅರ್ಜಿ ಪರಿಶೀಲಿಸಿ ನಿವೇಶನ ಹಂಚಿಕೆ ಮಾಡಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿರುವ ಮಾನದಂಡಗಳನ್ನು ವಾಪಸ್ ಪಡೆದು, ₹200 ಶುಲ್ಕ ಕಡಿಮೆ ಮಾಡಲು ಸೆಂಟರ್‌ಗಳಿಗೆ ಸೂಚಿಸಬೇಕು. ಮಳೆಗಾಲ ಆರಂಭವಾದ ಕಾರಣಕ್ಕಾಗಿ ಏರಿಯಾಗಳಲ್ಲಿ ರಸ್ತೆಗಳು ಗುಂಡಿಗಳಾಗಿವೆ. ಇದರಲ್ಲಿ ನಿಂತ ನೀರಿನಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಇದನ್ನು ತಡೆಯಲು ಫಾಗಿಂಗ್ ಸಿಂಪಡಿಸಬೇಕು. ಕುಡಿಯುವ ನೀರು ಕಲುಷಿತಗೊಂಡು ಕಲ್ಮಶ ನೀರು ಸರಬರಾಜು ಆಗುತ್ತಿದೆ ಇದನ್ನು ತಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ಎನ್. ಯಲ್ಲಾಲಿಂಗ, ಎಂ.ಜಂಬಯ್ಯ ನಾಯಕ, ಕೆ.ನಾಗರತ್ನಮ್ಮ, ಎ.ಕರುಣಾನಿಧಿ, ಎಂ.ಗೋಪಾಲ, ಕೆ.ಎಂ.ಸ್ವಪ್ನ, ಶಕುಂತಲಾ, ಈ.ಮಂಜುನಾಥ, ಹೇಮಂತ್ ನಾಯ್ಕ ಮತ್ತಿತರರಿದ್ದರು.