ದೊಡ್ಡಬಳ್ಳಾಪುರ: ಕೃಷಿ ಬಿಕ್ಕಟ್ಟು, ಭೂಸ್ವಾಧೀನ, ಕಾರ್ಮಿಕ ಹಕ್ಕುಗಳ ಧಮನ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಜನಾಂದೋಲನದ ಭಾಗವಾಗಿ ಇದೇ ಡಿ. 21ರಂದು ಬೃಹತ್ ಪ್ರತಿಭಟನಾ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ಮತ್ತು ಸದಸ್ಯ ಆರ್.ಚಂದ್ರತೇಜಸ್ವಿ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ಕೃಷಿ ಬಿಕ್ಕಟ್ಟು, ಭೂಸ್ವಾಧೀನ, ಕಾರ್ಮಿಕ ಹಕ್ಕುಗಳ ಧಮನ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಜನಾಂದೋಲನದ ಭಾಗವಾಗಿ ಇದೇ ಡಿ. 21ರಂದು ಬೃಹತ್ ಪ್ರತಿಭಟನಾ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ಮತ್ತು ಸದಸ್ಯ ಆರ್.ಚಂದ್ರತೇಜಸ್ವಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಎಲ್ಲಾ ಬೆಳೆಗಳಿಗೆ ಒಟ್ಟಾರೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರೈತಾಧಾರಿತ ಕೃಷಿ ರಕ್ಷಿಸಬೇಕು, ಕಾರ್ಪೊರೇಟ್ ಲಾಭದ ಕೃಷಿ ಕೈಬಿಡಬೇಕು. ಬಲವಂತದ. ಅನಗತ್ಯವಾದ ಭೂಸ್ವಾಧೀನ ನಿಲ್ಲಿಸಬೇಕು. ಬಿಜೆಪಿ ಸರ್ಕಾರದ ಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಭೂಮಿಯನ್ನು ರಕ್ಷಿಸಬೇಕು, ಬಡವರಿಗೆ ದಲಿತರಿಗೆ ಭೂಮಿಗಳನ್ನು ನೀಡಬೇಕು. ಬಗರ್‌ಹುಕುಂ ಮತ್ತು ಅರಣ್ಯ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ಬೆಂಗಳೂರಿನ ಸುತ್ತಮುತ್ತ ವಿವಿಧ ಉದ್ದೇಶಗಳಿಗೆ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರ ಒಪ್ಪಿಗೆ ಇಲ್ಲದೆ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸುವ ಹಕ್ಕೊತ್ತಾಯವನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.ಇಎಸ್‌ಐ ಆಸ್ಪತ್ರೆ ಶೀಘ್ರ ಉದ್ಘಾಟಿಸಿ:
ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು. ರಾಜ್ಯ ಸರ್ಕಾರ ಅವುಗಳನ್ನು ಜಾರಿ ಮಾಡಬಾರದು. ಗುತ್ತಿಗೆ, ಹೊರಗುತ್ತಿಗೆ ಮುಂತಾದ ಅಸ್ಥಿರ ಅತಂತ್ರ ಸ್ವರೂಪದ ಕೆಲಸಗಳನ್ನು ಖಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು. ಕನಿಷ್ಠ ವೇತನ ಮಾಸಿಕ ₹36,000 ಮತ್ತು ಎಲ್ಲಾ ನಿವೃತ್ತರಿಗೂ ಕನಿಷ್ಟ ಪಿಂಚಣಿ ₹9,000 ಜಾರಿಗೊಳಿಸಬೇಕು. ಕಟ್ಟಡ, ಸಾರಿಗೆ, ಮುಂತಾದ ಕಾರ್ಮಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು ಮತ್ತು ಭ್ರಷ್ಟಾಚಾರ ತಡೆಗಟ್ಟಬೇಕು. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಪೂರ್ಣಗೊಂಡು ನಾಲ್ಕು ವರ್ಷಗಳಿಂದ ಉದ್ಘಾಟನೆಯಾಗದಿರುವ ಇಎಸ್‌ಐ ಆಸ್ಪತ್ರೆ ಕೂಡಲೇ ಉದ್ಘಾಟನೆಯಾಗಬೇಕು ಎಂದರು.ನೇಯ್ಗೆ ಉದ್ದಿಮೆ ಉಳಿಸಲು ಸರ್ಕಾರ ಮುಂದಾಗಲಿ:
ಗೃಹ ಕೈಗಾರಿಕೆಯಾದ ನೇಯ್ಗೆ ಉದ್ದಿಮೆ ಉಳಿಸಲು ಸರ್ಕಾರ ಮಧ್ಯ ಪ್ರವೇಶ ಮಾಡಬೇಕು, ಜಿಲ್ಲೆಯಲ್ಲಿ ಮತ್ತು ದೊಡ್ಡಬಳ್ಳಾಪುರದಲ್ಲಿ ಈ ಉದ್ದಿಮೆಯನ್ನೇ ನಂಬಿ ಲಕ್ಷಾಂತರ ಜನರು ಬದುಕುತ್ತಿದ್ದಾರೆ ಇವರು ಉತ್ಪಾದಿಸಿದ ಬಟ್ಟೆಗೆ ಬೆಲೆ ಮತ್ತು ಬೇಡಿಕೆ ಇಲ್ಲದೆ ತುಂಬಾ ಸಂಕಷ್ಟದಲ್ಲಿದ್ದಾರೆ. ಹೊರರಾಜ್ಯದ ಸೀರೆಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ ಇದರಿಂದ ಉದ್ಭವಿಸಿದ ಬಿಕ್ಕಟ್ಟಿನ ಪರಿಹಾರ ಪರಿಹಾರಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ತಕ್ಷಣ ಮುಂದಾಗಬೇಕು, ನೇಕಾರ ಕಾರ್ಮಿಕರೆಲ್ಲರಿಗೂ ಸಮಾನ ಕೆಲಸದ ಸಮಯ ಮತ್ತು ಕೂಲಿ ನಿಗದಿಯಾಗಬೇಕು ಎಂದರು.ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಿ:
ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ತೀವ್ರಗೊಂಡಿದೆ. ಬಡವರು, ಮಧ್ಯಮ ವರ್ಗಗಳು ದುಬಾರಿ ವೆಚ್ಚಗಳನ್ನು ಭರಿಸಲಾಗಿದೆ ತತ್ತರಿಸುವಂತಾಗಿದೆ. ಸರ್ಕಾರಿ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ಮುಚ್ಚುತ್ತಾ, ಖಾಸಗಿ ಶಿಕ್ಷಣ ಪಡೆಯಿರಿ ಅಥವಾ ಶಿಕ್ಷಣವನ್ನು ತ್ಯಜಿಸಿರಿ ಎಂಬಂತೆ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಸದೃಢಗೊಳಿಸಿರುವ ಕೇರಳದ ಮಾದರಿಯನ್ನು ಅನುಸರಿಸಬೇಕು ಎಂದರು.ರೈತರು, ಕಾರ್ಮಿಕರು, ಜನಸಾಮಾನ್ಯರು, ಕೋಮುವಾದ ನಿಗ್ರಹ, ನೀರಾವರಿ, ಆರೋಗ್ಯ, ಶಿಕ್ಷಣ, ಭ್ರಷ್ಟಾಚಾರನಿಗ್ರಹ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಹಲವು ಸಮಸ್ಯೆಗಳು ಸೇರಿದಂತೆ 20 ವಿವಿಧ ಭೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನಾಂದೋಲನ, ಪ್ರತಿಭಟನಾ ಧರಣಿಗಳನ್ನು ಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
