ಸಾರಾಂಶ
ಡೀಸಲ್ ದರ, ಹೆದ್ದಾರಿ ಟೋಲ್ ದರ, ವಿದ್ಯುತ್, ಹಾಲು, ಮೆಟ್ರೋ ಪ್ರಯಾಣ ದರ ಸೇರಿ ಅನೇಕ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ಕಾರ್ಯಕರ್ತರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡೀಸಲ್ ದರ, ಹೆದ್ದಾರಿ ಟೋಲ್ ದರ, ವಿದ್ಯುತ್, ಹಾಲು, ಮೆಟ್ರೋ ಪ್ರಯಾಣ ದರ ಸೇರಿ ಅನೇಕ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ಕಾರ್ಯಕರ್ತರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಸಿಐಟಿಯು ಕಾರ್ಮಿಕ ವಿಭಾಗದ ಮುಖಂಡ ಮಹಾಂತೇಶ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಮಾತುಗಳು ಡೀಸಲ್ ಹಾಗೂ ಟೋಲ್ ದರ ಏರಿಕೆ ವಿಷಯದಲ್ಲಿ ಸಾಬೀತಾಗಿವೆ. ಹಣದುಬ್ಬರ ನೆಪ ಹೇಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತಿವೆ. ಅದೇ ರೀತಿ ಬಡವರು, ಕೂಲಿ ಕಾರ್ಮಿಕರ ದಿನಕೂಲಿ ಅಥವಾ ವೇತನ ಹೆಚ್ಚಳ ಮಾಡಲಾಗಿದೆಯೇ, ಅವರು ಕೂಡ ಬದುಕಲು ಅಗತ್ಯ ವಸ್ತುಗಳನ್ನು ಖರೀದಿಸಬೇಕಲ್ಲವೇ, ಅವರಿಗೆ ಹಣದುಬ್ಬರ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಹಾಲು, ಡೀಸೆಲ್ ಬೆಲೆ ಏರಿಕೆಗೆ ಅನ್ಯ ರಾಜ್ಯಗಳನ್ನು ಹೋಲಿಸಿ ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಬಡವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿದಂತೆ ಒಟ್ಟಾರೆ ಜನರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಕೋನದಿಂದ ನೋಡಬೇಕು. ಕೂಡಲೇ ಬೆಲೆ ಏರಿಕೆಯನ್ನು ಎರಡೂ ಸರ್ಕಾರಗಳು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪ್ರತಾಪ್ ಸಿಂಹ ಮಾತನಾಡಿ, ಜನಪ್ರತಿನಿಧಿಗಳ ವೇತನವನ್ನು ಚರ್ಚೆ ಇಲ್ಲದ ಹೆಚ್ಚಿಸಿಕೊಳ್ಳಲಾಗಿದೆ. ಆದರೆ, ಬಡವರ ವೇತನ ಹೆಚ್ಚಳ ಮಾಡುವ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಎಂದು ಹೇಳಿದರು. ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್, ಲಿಂಗರಾಜು, ಕೆ.ಎಲ್. ಲಕ್ಷ್ಮೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.