ಜಿಂದಾಲ್‌ಗೆ ಭೂಮಿ ಪರಭಾರೆ ಖಂಡಿಸಿ ಸಿಪಿಎಂ ಪ್ರತಿಭಟನೆ

| Published : Aug 24 2024, 01:15 AM IST

ಸಾರಾಂಶ

ಜಿಂದಾಲ್ ಕಂಪನಿಗೆ ನೀಡುವ ಒಟ್ಟು 3,667 ಎಕರೆಯ ಈಗಿನ ಮಾರಾಟದ ಮೌಲ್ಯ ₹11,001 ಕೋಟಿ ಮೌಲ್ಯದ್ದು.

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ತೋರಣಗಲ್ಲು- ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾದ ಜಿಂದಾಲ್ ಸ್ಟೀಲ್ ಕಂಪನಿಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಧರಿಸಿದ ಸಚಿವ ಸಂಪುಟದ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಸಿಪಿಎಂ, ಕೂಡಲೇ ಸಚಿವ ಸಂಪುಟದ ನಿರ್ಣಯವನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಈ ಪ್ರದೇಶದ ಅಭಿವೃದ್ಧಿಪಡಿಸಲಾದ ಜಮೀನುಗಳ ಬೆಲೆಯು ತಲಾ ಎಕರೆಗೆ ಕನಿಷ್ಠವೆಂದರೂ ₹3 ಕೋಟಿ ಆಗಲಿದೆ. ಅದರಂತೆ ಜಿಂದಾಲ್ ಕಂಪನಿಗೆ ನೀಡುವ ಒಟ್ಟು 3,667 ಎಕರೆಯ ಈಗಿನ ಮಾರಾಟದ ಮೌಲ್ಯ ₹11,001 ಕೋಟಿ ಮೌಲ್ಯದ್ದು. ಅಭಿವೃದ್ಧಿ ಪಡಿಸಲಾದ ಮೊತ್ತ ಶೇ.40 ಕಳೆದರೂ ಅದರ ಮೌಲ್ಯ ಸುಮಾರು 7,000 ಕೋಟಿ ಆಗುತ್ತದೆ. ಆದರೆ, ಸರ್ಕಾರ ಈಗ 1,667 ಎಕರೆಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ ಕೇವಲ ₹1.20 ಲಕ್ಷದಂತೆ ₹24.40 ಕೋಟಿ ನಿಗದಿಸಿದೆ. ಉಳಿದ 2,000 ಎಕರೆಗೆ ಕೇವಲ ₹1.5 ಲಕ್ಷದಂತೆ ಸುಮಾರು ₹25 ಕೋಟಿ ನಿಗದಿಪಡಿಸಿ ಒಟ್ಟು ,50 ಕೋಟಿಗೂ ಕಡಿಮೆ ದರಕ್ಕೆ ಮಾರಾಟಕ್ಕೆ ಕ್ರಮ ವಹಿಸಿರುವುದು ಖಂಡನೀಯವಾಗಿದೆ. ಈ ಅಕ್ರಮ ಮಾರಾಟದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹10,950 ಕೋಟಿ ನಷ್ಟವಾಗುತ್ತದೆ ಎಂದು ಸಿಪಿಎಂ ದೂರಿದೆ.

ರೈತರು ಗುತ್ತಿಗೆಗೆ ಪಡೆದ ಜಮೀನುಗಳಿಗೆ ನೀರಾವರಿ ಪ್ರದೇಶದಲ್ಲಿ ತಲಾ ಎಕರೆಗೆ ₹25 ರಿಂದ ₹30 ಸಾವಿರ ದರ ನೀಡುತ್ತಿರುವಾಗ ರಾಜ್ಯ ಸರ್ಕಾರ, ಕಂಪನಿಗಳಿಗೆ ಇಷ್ಟು ಕಡಿಮೆ ಬೆಲೆಗೆ ನೀಡುವುದೇಕೆ? ಕೂಡಲೇ ಗುತ್ತಿಗೆಯ ಮೊತ್ತವನ್ನು ಕನಿಷ್ಠ ₹30,000ಗೆ ಹೆಚ್ಚಿಸಬೇಕು. ಇದರಲ್ಲಿ ಜಮೀನು ನೀಡಿದ ರೈತ ಕುಟುಂಬಕ್ಕೆ ತಲಾ ಎಕರೆಗೆ ₹25,000 ನೀಡಲು ಅಗತ್ಯ ಕ್ರಮ ವಹಿಸಬೇಕು. ಗುತ್ತಿಗೆ ಜೊತೆ ಮಾರಾಟ (ಲೀಸ್ ಕಂ ಸೇಲ್) ಒಪ್ಪಂದದ ಮೂಲಕ ಹಳೆಯ ದರಕ್ಕೆ ಮಾರಾಟ ಮಾಡುವ ಕ್ರಮ ಅಕ್ಷಮ್ಯ. ಕೂಡಲೇ ಗುತ್ತಿಗೆ ಜೊತೆ ಮಾರಾಟ ಕ್ರಮದಲ್ಲಿ ಮಾರಾಟದ ಒಪ್ಪಂದವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಆರ್.ಭಾಸ್ಕರ್ ರೆಡ್ಡಿ, ಆರ್.ಎಸ್. ಬಸವರಾಜ, ಮಾಳಮ್ಮ, ಎ.ಕರುಣಾನಿಧಿ, ಕೆ.ನಾಗರತ್ನ, ಜಗನ್ನಾಥ್, ವಿ.ಸ್ವಾಮಿ, ಸಪ್ನ, ರೇಣುಕಮ್ಮ, ವಿರೂಪಾಕ್ಷಪ್ಪ ಎಂ. ಗೋಪಾಲ್ ಮತ್ತಿತರರಿದ್ದರು.