ಸಾರಾಂಶ
ಕುಡುತಿನಿ ಭೂ ಸಂತ್ರಸ್ತ ರೈತರಿಂದ ಆ.೮ರಂದು ಬಳ್ಳಾರಿ ಸಂಸದರು ಹಾಗೂ ಸಂಡೂರಿನ ಶಾಸಕರ ಮನೆಯ ಮುಂದೆ ನಡೆಯುವ ಪ್ರತಿಭಟನೆಗೆ ಸಿಪಿಎಂ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆ.
ಕನ್ನಡಪ್ರಭ ವಾರ್ತೆ ಸಂಡೂರು
ಕುಡುತಿನಿ ಭೂ ಸಂತ್ರಸ್ತ ರೈತರಿಂದ ಆ.೮ರಂದು ಬಳ್ಳಾರಿ ಸಂಸದರು ಹಾಗೂ ಸಂಡೂರಿನ ಶಾಸಕರ ಮನೆಯ ಮುಂದೆ ನಡೆಯುವ ಪ್ರತಿಭಟನೆಗೆ ಸಿಪಿಎಂ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆ.ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ನಡೆದ ಸಿಪಿಎಂ ಸಭೆಯಲ್ಲಿ ಮುಖಂಡರು ಈ ಕುರಿತು ತೀರ್ಮಾನ ಕೈಗೊಂಡರು.ಆ.೭ ರಂದು ಕುಡುತಿನಿಯಿಂದ ಸಂಡೂರಿಗೆ ಸಂತ್ರಸ್ತ ರೈತರು ಪಾದಯಾತ್ರೆ ಕೈಗೊಂಡಿದ್ದು, ತಾಲೂಕಿನ ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲು ಸಿಪಿಎಂ ಮುಖಂಡರು ಮನವಿ ಮಾಡಿದರು.
ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುತಿನಿ, ಹರಗಿನಡೋಣಿ, ವೇಣಿ ವೀರಾಪುರ ಹಾಗೂ ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಯಲ್ಲಿ ಅರ್ಸೆನಲ್ ಮಿತ್ತಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಉತ್ತಮ ಗಾಲ್ವಾ ಫೆರೋಸ್ ಲಿಮಿಟೆಡ್, ಎನ್‌ಎಂಡಿಸಿ ಲಿಮಿಟೆಡ್ ಸಂಸ್ಥೆಗಳಿಂದ ಕೈಗಾರಿಕೆಗಳ ಸ್ಥಾಪನೆಗಾಗಿ ೪೫೦೦ ಕುಟುಂಬಗಳಿಂದ ಬಲವಂತವಾಗಿ ಒಟ್ಟು ೧೨೮೯೩ ಎಕರೆಗಳಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನ ಪಡಿಸಿಕೊಂಡು ಸುಮಾರು ೧೫ ವರ್ಷಗಳಾದರೂ, ಇಲ್ಲಿಯವರೆಗೆ ಯಾವುದೇ ಕಾರ್ಖಾನೆ ಸ್ಥಾಪನೆ ಮಾಡಿಲ್ಲ.ಮಾರುಕಟ್ಟೆಯಲ್ಲಿ ಎಕರೆಗೆ ಕೊಟ್ಯಂತರ ಮೌಲ್ಯವಿದ್ದರೂ, ರೈತರಿಗೆ ಅತ್ಯಂತ ಕಡಿಮೆ ಪರಿಹಾರ ನೀಡಿ, ರೈತರಿಗೆ ಅನ್ಯಾಯ ಮಾಡಿದ್ದಾರೆ. ನ್ಯಾಯಾಲಯಕ್ಕೆ ಹೋಗಿದ್ದ ಕೆಲ ರೈತರು ಎಕರೆಗೆ ₹೧.೨೦ ಕೋಟಿಯಿಂದ ೧.೫೦ ಕೋಟಿವರೆಗೆ ಪರಿಹಾರ ಪಡೆದಿದ್ದಾರೆ. ಇನ್ನುಳಿದ ರೈತರಿಗೆ ಅತಿ ಕಡಿಮೆ ಪರಿಹಾರ ನೀಡಲಾಗಿದೆ. ತಮಗಾಗಿರುವ ಅನ್ಯಾಯ ಪ್ರತಿಭಟಿಸಿ ಸಂತ್ರಸ್ತ ರೈತರು ಕುಡುತಿನಿಯಲ್ಲಿ ಡಿ.೧೭, ೨೦೨೨ರಿಂದ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. ಉಪಚುನಾವಣೆ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ರೈತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸಭೆ ಕರೆದಿಲ್ಲ.
ಆದ್ದರಿಂದ ಸಂತ್ರಸ್ತ ರೈತರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.೮ ರಂದು ಸಂಸದರು ಹಾಗೂ ಶಾಸಕರ ಮನೆ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದು, ಈ ಧರಣಿಯನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು, ಮುಖಂಡರಾದ ಜೆ.ಎಂ. ಚನ್ನಬಸಯ್ಯ, ವಿ.ಎಸ್. ಶಿವಶಂಕರ್, ತಾಲೂಕು ಕಾರ್ಯದರ್ಶಿ ಎ. ಸ್ವಾಮಿ, ವಿವಿಧ ಶಾಖೆಗಳ ಕಾರ್ಯದರ್ಶಿಗಳಾದ ಎಚ್. ಸ್ವಾಮಿ, ಎಚ್. ದುರ್ಗಮ್ಮ, ಖಲಂದರ್ ಬಾಷ, ಪಂಪನಗೌಡ, ಕಾಲುಬಾ, ಎನ್. ಶಂಕ್ರಣ್ಣ ಮುಂತಾದವರಿದ್ದರು.