ಬಿತ್ತನೆಬೀಜ, ಡಿಎಪಿ ಗೊಬ್ಬರ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

| Published : May 22 2025, 01:35 AM IST

ಬಿತ್ತನೆಬೀಜ, ಡಿಎಪಿ ಗೊಬ್ಬರ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಕ್ಕೆಜೋಳ ಸೇರಿದಂತೆ ಬಿತ್ತನೆ ಬೀಜಗಳ ಬೆಲೆ ಹೆಚ್ಚಳ, ಡಿಎಪಿ ಗೊಬ್ಬರದ ಕೃತಕ ಅಭಾವ ಸೃಷ್ಟಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರಿಗೆ ಸಮರ್ಪಕ, ಗುಣಮಟ್ಟದ ಬಿತ್ತನೆಬೀಜ, ಗೊಬ್ಬರ ಪೂರೈಕೆ ಆಗುವಂತೆ ನೋಡಿಕೊಳ್ಳಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದ ಕೃಷಿ ಇಲಾಖೆಗೆ ಒತ್ತಾಯಿಸಲಾಯಿತು.

- ಕೃತಕ ಅಭಾವ ಸೃಷ್ಟಿ ವಿರುದ್ಧ ಕ್ರಮಕ್ಕೆ ಜರುಗಿಸಿ: ರೈತ ಸಂಘ, ಹಸಿರು ಸೇನೆ ಒತ್ತಾಯ । - - -

* (ಬೇಡಿಕೆಗಳೇನು) - ಕೃಷಿ ಇಲಾಖೆಯು ಮಧ್ಯ ಪ್ರವೇಶ ಮಾಡಿ, ಬಿತ್ತನೆ ಬೀಜದ ದರ ಇಳಿಸಬೇಕು.

- ಕಳೆದ ವರ್ಷದ ದರದಲ್ಲೇ ಬಿತ್ತನೆ ಬೀಜ ಮಾರಾಟ ಆಗುವಂತೆ ನೋಡಿಕೊಳ್ಳಬೇಕು.

- ಡಿಎಪಿ ಗೊಬ್ಬರ ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸರಳ‍ವಾಗಿ ದೊರೆಯಬೇಕು.

- ಬಿತ್ತನೆ ಬೀಜ, ರಸಗೊಬ್ಬರಗಳನ್ನು ಅಧಿಕ ಬೆಲೆಕೆ ಮಾರಾಟ ಮಾಡುವ ಮತ್ತು ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರರ ವಿರುದ್ಧ ಮೊಕದ್ದಮೆ ದಾಖಲಿಸಬೇಕು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೆಕ್ಕೆಜೋಳ ಸೇರಿದಂತೆ ಬಿತ್ತನೆ ಬೀಜಗಳ ಬೆಲೆ ಹೆಚ್ಚಳ, ಡಿಎಪಿ ಗೊಬ್ಬರದ ಕೃತಕ ಅಭಾವ ಸೃಷ್ಟಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರಿಗೆ ಸಮರ್ಪಕ, ಗುಣಮಟ್ಟದ ಬಿತ್ತನೆಬೀಜ, ಗೊಬ್ಬರ ಪೂರೈಕೆ ಆಗುವಂತೆ ನೋಡಿಕೊಳ್ಳಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದ ಕೃಷಿ ಇಲಾಖೆಗೆ ಒತ್ತಾಯಿಸಲಾಯಿತು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಸೇರಿದಂತೆ ಬಿತ್ತನೆ ಬೀಜಗಳ ದರ ಏಕಾಏಕಿ ಹೆಚ್ಚಿಸಿರುವುದು ಹಾಗೂ ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಖಂಡಿಸಿ ಮನವಿ ಅರ್ಪಿಸಿ, ರೈತರ ನೆರವಿಗೆ ಧಾವಿಸುವಂತೆ ಕೃಷಿ ಇಲಾಖೆ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗುತ್ತಿದೆ. ರೈತರು ಜಮೀನುಗಳನ್ನು ಹಸನು ಮಾಡಿಕೊಂಡು, ಬಿತ್ತನೆಗೆ ಕಾಯುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳದ ಬಿತ್ತನೆ ಬೀಜದ ಪ್ಯಾಕೆಟ್ ದರ ಕಳೆದ ವರ್ಷಕ್ಕೆ ಹೋಲಿಸಿದರೆ ₹300 ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಇದು ನಗರ ಪ್ರದೇಶದ ಹೆಚ್ಚಳವಾದರೆ, ಗ್ರಾಮೀಣ ಪ್ರದೇಶದಲ್ಲಿ ಇದರ ಬೆಲೆ ₹500 ರಿಂದ ₹1 ಸಾವಿರವರೆಗೆ ಹೆಚ್ಚಾಗಿದೆ ಎಂಬ ದೂರು ರೈತರಿಂದ ಕೇಳಿಬರುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಡಿಎಪಿ ಗೊಬ್ಬರದ ಕೊರತೆ ಕೃತಕವಾಗಿ ಸೃಷ್ಟಿಸಲಾಗುತ್ತಿದೆ. ವರ್ತಕರು ಈ ಮೂಲಕ ರೈತರಿಗೆ ₹3500 ವರೆಗೆ ಪ್ರತಿ ಕ್ವಿಂಟಲ್‌ಗೆ ಡಿಎಪಿ ಮಾರಾಟ ಮಾಡುತ್ತಿದ್ದಾರೆ. ರೈತ ಸಂಘ ಮತ್ತು ಹಸಿರು ಸೇನೆ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸುವ ಮೂಲಕ ರೈತರ ಪರಧ್ವನಿ ಎತ್ತುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ದುಪ್ಪಟ್ಟು ದರ ಏರಿಕೆ:

ಕಳೆದ ವರ್ಷ ಡಿಕಾಲ್ಬ್‌ ಕಂಪನಿಯ 1933 ಹೆಸರಿನ 4 ಕೆಜಿ ತೂಕದ ಮೆಕ್ಕೆಜೋಳದ ಪ್ಯಾಕೆಟ್ ದರ ₹1150 ಇತ್ತು. ಈಗ ಅದು ₹1400 ಆಗಿದೆ. ಪ್ಯಾಕೆಟ್‌ಗೆ ₹250 ಹೆಚ್ಚಿಸಲಾಗಿದೆ. ಇದೇ ಕಂಪನಿಯ 1978 ನಂಬರ್‌ ಪ್ಯಾಕೆಟ್‌ ಬೆಲೆ ಕಳೆದ ವರ್ಷ ₹1250 ಇದ್ದು, ಈಗ ₹1750 ಆಗಿದ್ದು, ₹500 ಹೆಚ್ಚಿಸಲಾಗಿದೆ. 3501 ನಂಬರ್‌ನ ಪಯೋನಿಯರ್‌ ಮೆಕ್ಕೆಜೋಳದ ಬೆಲೆ ಕಳೆದ ವರ್ಷ ₹1300 ಇತ್ತು. ಈಗ ₹1500 ಆಗಿದ್ದು, ₹200 ದರ ಹೆಚ್ಚಿಸಲಾಗಿದೆ. ಕಾವೇರಿ ಕಂಪನಿ ಕಳೆದ ವರ್ಷಕ್ಕೆ ಹೋಲಿಸಿದರೆ ₹250 ಹೆಚ್ಚಿಸಿದೆ. ಈ ಮೂಲಕ ಬೀಜ ಉತ್ಪಾದನಾ ಕಂಪನಿಗಳು ಮತ್ತು ಮಾರಾಟಗಾರರು ಬಡರೈತರ ಮೇಲೆ ಪ್ರಹಾರ ಮಾಡಲು ಹೊರಟಿದ್ದಾರೆ ಎಂದು ಅವರು ದೂರಿದರು.

ವಿಚಕ್ಷಣ ದಳ ರಚನೆ:

ಮನವಿ ಸ್ವೀಕರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ತಕ್ಷಣವೇ ಜಿಲ್ಲಾದ್ಯಂತ ಕೃಷಿ ಇಲಾಖೆ ವಿಚಕ್ಷಣ ದಳ ರಚಿಸಿ, ಕಾಳಸಂತೆಯಲ್ಲಿ ಗೊಬ್ಬರ, ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಮಾರುವವರ ವಿರುದ್ಧ ನಿಗಾ ವಹಿಸಲಾಗುವುದು. ಎಲ್ಲ ರೈತರಿಗೂ ಸಮರ್ಪಕವಾಗಿ ಗೊಬ್ಬರ, ಬಿತ್ತನೆಬೀಜ ಸಿಗುವ ವ್ಯವಸ್ಥೆಯನ್ನು 3-4 ದಿನದಲ್ಲೇ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ಸಂಘದ ಮುಖಂಡರಾದ ಹೂವಿನಮಡು ನಾಗರಾಜ, ಹುಚ್ಚವ್ವನಹಳ್ಳಿ ಪ್ರಕಾಶ, ದಯಾನಂದ, ಗುಮ್ಮನೂರು ರುದ್ರೇಶ, ಚಿನ್ನಸಮುದ್ರ ಸುರೇಶ ನಾಯ್ಕ, ದೇವನಾಯ್ಕ, ಗಿರಿಯಾಪುರ ಗಂಗಾಧರ ಸ್ವಾಮಿ, ಹೊನ್ನಮರಡಿ ಶಿವಕುಮಾರ, ಪಾಲನಾಯಕನ ಕೋಟೆ ಮಾರನಾಯ್ಕ, ಬೋರಗೊಂಡನಹಳ್ಳಿ ಕಲ್ಲೇಶ, ಆಲೂರು ಪರಶುರಾಮ, ಆನಗೋಡು ಭೀಮಣ್ಣ, ಕಬ್ಬೂರು ಪ್ರಸನ್ನ, ಮಲ್ಲಿಕಾರ್ಜುನ, ನಾಗರಾಜ, ಶಾಮನೂರು ನಾಗರಾಜ, ಯರವನಾಗತಿಹಳ್ಳಿ ಅಣ್ಣಪ್ಪ, ಬಿ.ಆರ್. ಅಣ್ಣಪ್ಪ, ಬೋರಗೊಂಡನಹಳ್ಳಿ ಹಾಲೇಶ ಇತರರು ಇದ್ದರು.

- - -

-21ಕೆಡಿವಿಜಿ3.ಜೆಪಿಜಿ:

ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ಅವರಿಗೆ ಮನವಿ ಅರ್ಪಿಸಲಾಯಿತು.