ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗಳ ಮೇಲೆ ದಾಳಿ ಮಾಡಿ, ಬಲಿ ಪಡೆದ ಘಟನೆಯನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತೀವ್ರವಾಗಿ ಖಂಡಿಸಿದ್ದಾರೆ.ಪ್ರವಾಸಿಗರನ್ನು ಬಲಿಗೈದ ಉಗ್ರರ ದಮನಕ್ಕೆ ಕೇಂದ್ರ ಸರ್ಕಾರದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಹಲ್ಗಾಂ ಘಟನೆಯಿಂದ ದೇಶದ ಜನತೆ ಬೆಚ್ಚಿಬಿದ್ದಿದ್ದಾರೆ. ದೇಶದ ಏಕತೆ, ಅಖಂಡತೆ ಮೇಲೆ ನಡೆದ ನೇರ ದಾಳಿ ಇದಾಗಿದೆ. ಅತ್ಯಂತ ಹೇಯ ಕೃತ್ಯ. ಈ ದಾಳಿಯು 2000ರ ಚಿಕ್ಕಿಸಿಂಘಪುರ ನರಮೇಧ ನಂತರದ ಅತ್ಯಂತ ಘೋರ ಕೃತ್ಯಗಳಲ್ಲಿ ಒಂದಾಗಿದೆ. ನಿರಾಯುಧ ನಾಗರೀಕರನ್ನು ಗುರಿಯಾಗಿಸಿದ ಈ ಕೃತ್ಯವನ್ನು ಎತ್ತಿ ಹಿಡಿಯುವುದು ಮಾನವೀಯತೆಯ ವಿರುದ್ಧದ ನಡೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಘಟನೆಯಲ್ಲಿ ರಾಜಕೀಯಕ್ಕೆ ಜಾಗವಿಲ್ಲ. ನಾವು ಒಟ್ಟಾಗಿ ನಿಂತು, ದುಃಖತಪ್ತ ಕುಟುಂಬಗಳಿಗೆ ನ್ಯಾಯ ದೊರಕಿಸಬೇಕು. ರಾಜ್ಯದ ಮೂವರು ಪ್ರವಾಸಿಗರು ಸೇರಿದಂತೆ ಸುಮಾರು 27 ಜನರನ್ನು ಉಗ್ರರು ಬಲಿ ಪಡೆದಿದ್ದು, ನೋವಿನ ಸಂಗತಿ. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಸಂತಾಪ ಸೂಚಿಸುವುದಾಗಿ ಸಂಸದರು ತಿಳಿಸಿದ್ದಾರೆ.ಈಗಾಗಲೇ ರಾಜ್ಯ ಸರ್ಕಾರದಿಂದ ಸಚಿವ ಸಂತೋಷ್ ಲಾಡ್‌ರನ್ನು ಜಮ್ಮು-ಕಾಶ್ಮೀರಕ್ಕೆ ಕಳಿಸಿದ್ದು, ಕರ್ನಾಟಕದ ಪ್ರವಾಸಿಗರ ಭೇಟಿ ಮಾಡಿ, ಸಂತ್ರಸ್ತರನ್ನು ಸುರಕ್ಷಿತವಾಗಿ ವಾಪಸ್ ಕರೆ ತರುವ ಕೆಲಸ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಎಲ್ಲ ರೀತಿಯ ನೆರವು ದೊರಕಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಪ್ರವಾಸೋದ್ಯಮವೇ ಕಾಶ್ಮೀರದ ಆರ್ಥಿಕ ಶಕ್ತಿ. ಈಗ ಈ ಘಟನೆಯಿಂದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬಿದ್ದಿದೆ. ಅಮರನಾಥ ಯಾತ್ರೆ ಆರಂಭ ಹಿನ್ನೆಲೆ, ಯಾತ್ರಿಕರಿಗೆ ಸಮರ್ಪಕ ಭದ್ರತೆ ಒದಗಿಸಲಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿ, ಭಯೋತ್ಪಾದನೆ ವಿರುದ್ಧ ಸಂಯುಕ್ತ ರಣತಂತ್ರ ರೂಪಿಸಬೇಕು. ಕಾಂಗ್ರೆಸ್ ಯಾವಾಗಲೂ ಭಯೋತ್ಪಾದನೆ ಮತ್ತು ವಿಭಜನೆಯ ವಿರುದ್ಧ ಹೋರಾಡುತ್ತಾ ಬಂದಿದೆ. ಈ ಹೋರಾಟದಲ್ಲಿ ನಮ್ಮ ನಾಯಕರು ಪ್ರಾಣತ್ಯಾಗ ಮಾಡಿದ ಇತಿಹಾಸವೂ ಇದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.- - -
-25ಕೆಡಿವಿಜಿ8: ಡಾ.ಪ್ರಭಾ ಮಲ್ಲಿಕಾರ್ಜುನ