ಸಾರಾಂಶ
ಹುಬ್ಬಳ್ಳಿ: ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಅದರಲ್ಲೂ ಎಸ್ಸೆಸ್ಸೆಲ್ಸಿ ಎಂಬುದು ಜೀವನದ ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ಜೀವನದಲ್ಲಿ ಏನೂ ಮಾಡಬೇಕೆಂಬ ತಿಳಿವಳಿಕೆ ಬರುತ್ತದೆ. ಈ ನಿಟ್ಟಿನಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಬೇಕಾದ ಆತ್ಮವಿಶ್ವಾಸವನ್ನು ಅಮೃತ ಅಕಾಡೆಮಿ ಹಾಗೂ ಕ್ರ್ಯಾಕ್ ಇಟ್ ಸಂಸ್ಥೆ ಮಾಡುತ್ತಿದೆ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನೀಸ್‌ನ ಚೇರ್ಮನ್ ಡಾ. ವಿ.ಎಸ್.ವಿ ಪ್ರಸಾದ್ ಹೇಳಿದರು.
ನಗರದ ಉಣಕಲ್‌ನಲ್ಲಿನ ಪ್ರೆಸಿಡೆಂಟ್ ಹೊಟೆಲ್‌ನ ಸಮ್ಮಿಲನ ಹಾಲ್‌ನಲ್ಲಿ ಅಮೃತ ಅಕಾಡೆಮಿ ಧಾರವಾಡದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿಪಡಿಸಿದ ಆ್ಯಪ್ ಹಾಗೂ ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಅಭಿವೃದ್ಧಿ ಪಡಿಸಿದ ಕ್ರ್ಯಾಕ್ ಇಟ್ ಬ್ಯಾಂಕಿಂಗ್ ಆ್ಯಪ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆಯಲ್ಲಿ ಹಿಡಿತ ಕಡಿಮೆಯಿರುವ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಬೆಳೆಸಿ, ಆಂಗ್ಲ ಭಾಷೆಯ ವಿದ್ಯಾರ್ಥಿಗಳು ಹಾಗೂ ಕನ್ನಡ ಮಾದ್ಯಮ ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆ ಮಾಡುವ ಕೆಲಸ ಈ ಸಂಸ್ಥೆ ಮಾಡುತ್ತಿದೆ ಎಂದರು.
ಸದ್ಯ ಭಾರತದಲ್ಲಿ ಯುವಶಕ್ತಿ ಬಹಳಷ್ಟಿದ್ದು, ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಮೊದಲ ಮೆಟ್ಟಿಲಾಗಿದೆ. ಜೀವನದಲ್ಲಿ ಉದ್ಯೋಗ ಪಡೆದುಕೊಳ್ಳುವುದು ಎಷ್ಟು ಮುಖ್ಯವೋ ಅದೇ ತರಹ ಉದ್ಯೋಗದಾತರಾಗುವುದು ತುಂಬಾ ಮುಖ್ಯ ಎಂದರು.ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ 19 ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಈ ಫಲಿತಾಂಶದ ಸಂಖ್ಯೆ 1ರಿಂದ 5ಕ್ಕೆ ಏರಿಕೆಯಾಗಬೇಕು ಎಂದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿವ್ಹಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಪಾಟೀಲ್ ಮಾತನಾಡಿ, ಜೀವನದ ಯಶಸ್ವಿಗೆ ಜ್ಞಾನ, ಪರಿಶ್ರಮ, ತಾಳ್ಮೆ ಮುಖ್ಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಅತ್ಯುತ್ತಮ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಕೋವಿಡ್ ಬಳಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆನ್ಲೈನ್ ಕ್ಲಾಸ್ ಗೆ ಹೆಚ್ಚಿನ ಮಹತ್ವ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳ ಕೊರತೆಯಿದ್ದು, ಅದನ್ನು ಸರಿಮಾಡುವ ಕೆಲಸ ಈ ಸಂಸ್ಥೆ ಮಾಡಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತೋಷ ಇಂಚಲ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ತಮ್ಮ ಜೀವನದಲ್ಲಿ ಯಶಸ್ಸುಗಳಿಸಬೇಕು, ಅವರು ಕೂಡಾ ಸರ್ಕಾರಿ ಉದ್ಯೋಗಾವಕಾಶ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಈ ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂತೋಷ ಹೊಂಗಲ್, ಅರ್ಜುನ್ ಪಾಟೀಲ್, ಬಸವರಾಜ ಬಾಣಿ, ಪ್ರಶಾಂತ ಮಾಂಡ್ರೆ, ಸಂಜಯ ಇಂಚಲ ಸೇರಿದಂತೆ ಮುಂತಾದವರು ಇದ್ದರು.ಸಾಧಕರಿಗೆ ಸನ್ಮಾನ: ಲೋಕಾರ್ಪಣೆ ಸಮಾರಂಭದಲ್ಲಿ ಈ ಹಿಂದೆ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಸರ್ಕಾರಿ ಉದ್ಯೋಗ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.