ಸಿದ್ದಾಪುರ ಪಟ್ಟಣದಲ್ಲಿ ಶನಿವಾರ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ, ಅಗತ್ಯ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿದರು.
ಸಿದ್ದಾಪುರ: ಸಿದ್ದಾಪುರ ಪಟ್ಟಣದಲ್ಲಿ ಶನಿವಾರ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ, ಅಗತ್ಯ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿದರು.
ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ವಾಹನಗಳ ದಾಖಲೆ, ಚಾಲನಾ ಪರವಾನಗಿ, ವಿಮೆ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಯಿತು. ದಾಖಲೆಗಳಿಲ್ಲದೆ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ಎಲ್ಲ ಸಮರ್ಪಕ ದಾಖಲೆಗಳನ್ನು ಹೊಂದಿಯೇ ವಾಹನ ಚಲಾಯಿಸುವಂತೆ ಎಚ್ಚರಿಕೆ ನೀಡಲಾಯಿತು.ಇದೇ ವೇಳೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಸವಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಯಿತು. ಜೊತೆಗೆ ತೋಟ ಕಾರ್ಮಿಕರನ್ನು ನಿಯಮ ಉಲ್ಲಂಘಿಸಿ ತುಂಬಿಸಿಕೊಂಡು ಸಾಗಿಸುತ್ತಿದ್ದ ಜೀಪುಗಳ ಮೇಲೂ ಪರಿಶೀಲನೆ ನಡೆಸಿ ಸಂಬಂಧಿಸಿದ ವಾಹನಗಳಿಗೆ ದಂಡ ವಿಧಿಸಲಾಯಿತು.
ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಠಾಣಾಧಿಕಾರಿ ಮಂಜುನಾಥ್ ಮನವಿ ಮಾಡಿದ್ದಾರೆ.