ರಾಮನವಮಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀರಾಮನ ದರ್ಶನ ಪಡೆದರು. ಇದಕ್ಕೂ ಪೂರ್ವ ಶ್ರೀರಾಮ ಜನ್ಮೋತ್ಸವ ಅಂಗವಾಗಿ ಶ್ರೀರಾಮನ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ-ವಿಧಾನದೊಂದಿಗೆ ತೊಟ್ಟಿಲೋತ್ಸವ ನಡೆಯಿತು.

ಹುಬ್ಬಳ್ಳಿ:

ವಿವಿಧ ಶ್ರೀರಾಮ ಮಂದಿರ, ಹನುಮಾನ ಮಂದಿರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಗರದೆಲ್ಲೆಡೆ ಶ್ರೀರಾಮ ನವಮಿ ಉತ್ಸವವನ್ನು ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಇಲ್ಲಿನ ಕಮರಿಪೇಟೆ, ದಾಜಿಬಾನ್‌ಪೇಟೆ ಗೌಳಿ, ಅರಳಿಕಟ್ಟಿ ಓಣಿ, ಹಳೇಹುಬ್ಬಳ್ಳಿಯ ಶ್ರೀರಾಮ ದೇವಸ್ಥಾನವನ್ನು ರಾಮನವಮಿ ನಿಮಿತ್ತ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೇ, ರಾಮನಾಮ ಸ್ಮರಣೆ ಮಧ್ಯೆ ರಾಮತಾರಕ ಹೋಮ ಸೇರಿದಂತೆ ವಿವಿಧ ಬಗೆಯ ವಿಶೇಷ ಪೂಜೆ ನೆರವೇರಿಸಲಾಯಿತು.

ರಾಮನವಮಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀರಾಮನ ದರ್ಶನ ಪಡೆದರು. ಇದಕ್ಕೂ ಪೂರ್ವ ಶ್ರೀರಾಮ ಜನ್ಮೋತ್ಸವ ಅಂಗವಾಗಿ ಶ್ರೀರಾಮನ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ-ವಿಧಾನದೊಂದಿಗೆ ತೊಟ್ಟಿಲೋತ್ಸವ ನಡೆಯಿತು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು, ತೊಟ್ಟಿಲು ತೂಗುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ವಿಶೇಷವಾಗಿ ದಾಜಿಬಾನಪೇಟೆ, ಕಮರಿಪೇಟೆ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ರಾಮ-ಲಕ್ಷ್ಮಣ, ಸೀತಾ ಅವರ ಮೂರ್ತಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸುತ್ತಲಿನ ಪ್ರದೇಶದ ನಿವಾಸಿಗಳು ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ಆಂಜನೇಯ ದೇವಸ್ಥಾನದಲ್ಲೂ ವಿಶೇಷ ಪೂಜೆ-ಪುನಸ್ಕಾರ ನಡೆದವು. ಅಲ್ಲದೇ, ದೇವಸ್ಥಾನದ ಆವರಣದಲ್ಲಿ ಶ್ರೀರಾಮ-ಲಕ್ಷ್ಮಣರ ಭಾವಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಿ ನಂತರ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪ್ರಸಾದ ವಿತರಿಸಲಾಯಿತು.

ಕೆಲವು ದೇವಸ್ಥಾನಗಳಲ್ಲಿ ಅನ್ನಪ್ರಸಾದ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದವು. ರಾಮನವಮಿ ನಿಮಿತ್ತ ಕೇಸರಿ ಶಲ್ಯೆ ಧರಿಸಿದ ಮಹಿಳೆಯರು, ಮಕ್ಕಳು, ಯುವಕರು ಆಯಾ ಪ್ರದೇಶದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮನವಮಿ ಆಚರಿಸಿದರೆ, ಮಕ್ಕಳು ಶ್ರೀರಾಮನ ವೇಷ-ಭೂಷಣದಲ್ಲಿ ಕಂಗೊಳಿಸಿದರು. ಅದರಂತೆ ಯುವಕರು ತಮ್ಮ ಬೈಕ್‌ಗೆ ಶ್ರೀರಾಮ ಹಾಗೂ ಹನುಮಂತ ಭಾವಚಿತ್ರವುಳ್ಳ ಕೇಸರಿ ಧ್ವಜ ಕಟ್ಟಿಕೊಂಡು ನಗರದಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅರಳಿಕಟ್ಟಿ ಓಣಿ:

ಇಲ್ಲಿಯ ಅರಳಿಕಟ್ಟಿ ಓಣಿಯ ಶ್ರೀರಾಮನ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಂಚ್ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾರಾಯಣಸಾ ಪವಾರ, ರಾಘು ಪವಾರ, ಗೋವಿಂದಸಾ ಜರತಾರಘರ, ವೆಂಕಟೇಶ ಹಬೀಬ್, ದತ್ತುಸಾ ಧೋಂಗಡಿ ಸೇರಿದಂತೆ ಅನೇಕರು ಪಾಲ್ಗೊಂಡು ಶ್ರೀರಾಮ ದರ್ಶನಾರ್ಶೀವಾದ ಪಡೆದರು.

ಪ್ರವಚನ:

ಕೇಶ್ವಾಪುರದ ಅಂಬಿಕಾನಗರದಲ್ಲಿರುವ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಲ್ಲಿ ಪಂ. ಯಾದವಾಚಾರ್ಯ ದಿವಾಕರ ನೇತೃತ್ವದಲ್ಲಿ ರಾಮನವಮಿ ನಿಮಿತ್ತ ಪ್ರವಚನ ಕಾರ್ಯಕ್ರಮ ನಡೆಯಿತು. ಈ ಮೂಲಕ ರಾಮನ ಸಂದೇಶ ತಿಳಿಸಲಾಯಿತು. ಈ ವೇಳೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಇದ್ದರು.