ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಕ್ರೇನ್ ಚಾಲಕ ದೌರ್ಜನ್ಯ

| Published : Jan 26 2025, 01:33 AM IST

ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಕ್ರೇನ್ ಚಾಲಕ ದೌರ್ಜನ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛತಾ ಕರ್ತವ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ಕೊರಳಪಟ್ಟಿ ಹಿಡಿದುಕೊಂಡು ನಾಲ್ಕೈದು ಜನ ಪೌರ ಕಾರ್ಮಿಕರೊಂದಿಗೆ ಕ್ರೇನ್ ಆಪರೇಟರ್ ಎನ್ನಲಾದ ವ್ಯಕ್ತಿಯೊಬ್ಬ ಪುಂಡಾಟ ನಡೆಸಿ, ಅವಾಚ್ಯವಾಗಿ ನಿಂತಿಸಿದ ಘಟನೆ ಇಲ್ಲಿನ ವಿನೋಬ ನಗರದ 1ನೇ ಮುಖ್ಯರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ವಿಡಿಯೋ ವೈರಲ್‌ । ರಸ್ತೆಯಲ್ಲೇ ಕ್ರೇನ್ ನಿಲ್ಲಿಸಿ, ಅವಾಚ್ಯ ಪದದಿಂದ ನಿಂದನೆ, ಆರೋಪ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ವಚ್ಛತಾ ಕರ್ತವ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ಕೊರಳಪಟ್ಟಿ ಹಿಡಿದುಕೊಂಡು ನಾಲ್ಕೈದು ಜನ ಪೌರ ಕಾರ್ಮಿಕರೊಂದಿಗೆ ಕ್ರೇನ್ ಆಪರೇಟರ್ ಎನ್ನಲಾದ ವ್ಯಕ್ತಿಯೊಬ್ಬ ಪುಂಡಾಟ ನಡೆಸಿ, ಅವಾಚ್ಯವಾಗಿ ನಿಂತಿಸಿದ ಘಟನೆ ಇಲ್ಲಿನ ವಿನೋಬ ನಗರದ 1ನೇ ಮುಖ್ಯರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಇಲ್ಲಿನ ವಿನೋಬ ನಗರದಲ್ಲಿ ಪಾಲಿಕೆ ತ್ಯಾಜ್ಯ ವಿಲೇವಾರಿ ಟ್ರ್ಯಾಕ್ಟರ್‌ನಲ್ಲಿ ಲೋಡರ್ಸ್‌ ಆಗಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಾದ ಕಾರ್ತಿಕ್, ಮೋಹನ, ದೇವರಾಜ, ಆಕಾಶ್ ಹಾಗೂ ಮೈಲಾರಿ ಎಂಬುವರೊಂದಿಗೆ ಕ್ರೇನ್ ಆಪರೇಟರ್ ಎನ್ನಲಾದ ವ್ಯಕ್ತಿಯೊಬ್ಬ ವಿನಾಕಾರಣ ಜಗಳ ಮಾಡಿ, ಕೊರಳ ಪಟ್ಟಿ ಹಿಡಿದು, ಅವಾಚ್ಯವಾಗಿ ಮನೆಯ ಹೆಣ್ಣು ಮಕ್ಕಳಿಗೆಲ್ಲಾ ನಿಂದಿಸಿ, ದೌರ್ಜನ್ಯ ಎಸಗಿರುವ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿದೆ.

ವಿನೋಬ ನಗರ 1ನೇ ಮುಖ್ಯರಸ್ತೆಯಲ್ಲಿ ಎಂದಿನಂತೆ ಪೌರ ಕಾರ್ಮಿಕರು ಟ್ರ್ಯಾಕ್ಟರ್‌ನಲ್ಲಿ ಕಸ ಸಂಗ್ರಹಿಸುತ್ತಾ ಬರುವಾಗ ರಸ್ತೆಯಲ್ಲಿ ಕ್ರೇನ್‌ವೊಂದು ವಾಹನಗಳ ಸಂಚಾರಕ್ಕೆ ಅಡ್ಡವಾಗುವಂತೆ ನಿಂತಿತ್ತು. ಸ್ವಲ್ಪ ಕ್ರೇನ್ ಸರಿಸುವಂತೆ ವ್ಯಕ್ತಿಗೆ ಪೌರ ಕಾರ್ಮಿಕರು ಕೇಳಿದರೆ ದುರ್ನಡತೆ ತೋರಿದ್ದಾನೆ. ಅಷ್ಟೇ ಅಲ್ಲ, ಯಾವನಿಗೆ ಕರೆಸ್ತೀಯೋ ಕರೆಸು ಅಂತಾ ಹೇಳಿ, ಏಕಾಏಕಿ ಉದ್ಧಟತನ ಮೆರೆದಿದ್ದಾನೆ.

ಪೌರ ಕಾರ್ಮಿಕರು ಸೌಜನ್ಯದಿಂದಲೇ ಮಾತನಾಡಿದರೂ ಪುಂಡಾಟ ಮೆರೆಯುತ್ತಿದ್ದವನ ದುರ್ವರ್ತನೆ ಮಿತಿ ಮೀರುವಂತಿತ್ತು. ರಸ್ತೆಯಲ್ಲಿ ನಿಲ್ಲಿಸಿರುವ ಕ್ರೇನ್ ತೆರೆಯಲ್ಲ. ಯಾವಾನಿಗೆ ಕರೆಸ್ತೀರೋ ಕರೆಸ್ರಿ ಅಂತಾ ಪೌರ ಕಾರ್ಮಿಕರ ಕೊರಳ ಪಟ್ಟಿ ಹಿಡಿದು, ಕೆಲವರ ಮೇಲೆ ಪುಂಡಾಟ ಮೆರೆಯುತ್ತಿದ್ದ ವ್ಯಕ್ತಿ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿ, ಅದು ಯಾರಿಗೋ ಕರೆ ಮಾಡಿ, ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ಪೌರ ಕಾರ್ಮಿಕರು ಸಹ ತಾಳ್ಮೆ ಕಳೆದುಕೊಳ್ಳದೇ ಸಮಾಧಾನದಿಂದಲೇ ವರ್ತಿಸಿದ್ದಾರೆ.

ಕ್ರೇನ್ ತೆಗೆಯಲು ಹಿಂದೇಟು ಹಾಕಿದ್ದರಿಂದ ಅದರ ಚಕ್ರಗಳ ಗಾಳಿ ಬಿಡಬೇಕಾಗುತ್ತದೆಂಬ ಮಾತುಗಳು ಬೆಳೆದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಎನ್ನಲಾಗಿದೆ. ನಡು ರಸ್ತೆಯಲ್ಲೇ ಕ್ರೇನ್ ನಿಲ್ಲಿಸಿಕೊಂಡಿದ್ದಲ್ಲದೇ, ಸ್ವಚ್ಛತಾ ಸಿಬ್ಬಂದಿಗಳಾದ ಪೌರ ಕಾರ್ಮಿಕರ ಮೇಲೆಯೇ ತನ್ನ ಶಕ್ತಿ ಪ್ರದರ್ಶನ ತೋರಿದ ವ್ಯಕ್ತಿ ವರ್ತನೆ ಬಗ್ಗೆ ಪಾಲಿಕೆ ಆಯುಕ್ತರು, ಪಾಲಿಕೆ ಇನ್ಸಪೆಕ್ಟರ್‌, ಅಧಿಕಾರಿ ವರ್ಗಗಳ ಗಮನಕ್ಕೆ ತಂದರೂ ಸ್ಥಳಕ್ಕೆ ಬಂದು ಪೌರ ಕಾರ್ಮಿಕರ ಪರ ನಿಲ್ಲುವ ಬದಲಿಗೆ, ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.