ಸಾರಾಂಶ
ಪ್ರೇರಣಾ ಕಾರ್ಯಾಗಾರದಲ್ಲಿ ಜಿಲ್ಲಾ ಉಪನಿರ್ದೇಶಕ ಎನ್.ಎಚ್. ನಾಗೂರ ಭಾಗವಹಿಸಿ ಕಲಿಕಾ ವಾತಾವರಣ ನಿರ್ಮಿಸಲು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮೃದು ಮನಸಿನ ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ತಿದ್ದಿ ತೀಡಿ ಶಿಕ್ಷಣ ನೀಡಿ ಅವರ ಜೀವನವನ್ನು ನಿರ್ಮಿಸುವ ಶಿಕ್ಷಕರೇ ಧನ್ಯರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಎಚ್. ನಾಗೂರ ಹೇಳಿದರು.ತಾಲೂಕಿನ ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಸಂಸ್ಥೆ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ವಿಜಯಪುರ ಸಹಯೋಗದಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗುರು ಪರಂಪರೆಗೆ ಹೆಚ್ಚು ಮಹತ್ವ ಕೊಟ್ಟಿರುವವರು ನಾವು. ಸಮಾಜ ಅತೀ ಹೆಚ್ಚು ಗೌರವ ಕೊಡುವ ಕ್ಷೇತ್ರ ನಮ್ಮ ಶಿಕ್ಷಕರ ಕ್ಷೇತ್ರವಾಗಿದೆ. ಶಾಲೆಯು ಜೀವಂತ ದೇವರ ಗುಡಿ ಎಂದು ಸಮಾಜ ನಂಬಿದೆ. ಕಡುಬಡತನದ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಅವರ ಜೀವನ ಉಜ್ವಲಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಯಲ್ಲಿ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಮುಖ್ಯೋಪಾಧ್ಯಾಯರದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಬೇಕು. ಗೈರು ಮಕ್ಕಳ ಸಂಖ್ಯೆ ಹಾಗೂ ಕೋಚಿಂಗ್ ಕೇಂದ್ರಗಳಿಗೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.ಗ್ರಾಮೀಣ ವಲಯದ ಬಿಇಒ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ, ಹಿಂದುಳಿದ ಮಕ್ಕಳ ಜೀವನ ನಿರ್ಮಿಸಲು ನಮ್ಮ ಶಿಕ್ಷಕರ ಪಾತ್ರ ದೊಡ್ಡದಾಗಿದೆ ಎಂದರು.
ನಿವೃತ್ತ ಉಪನಿರ್ದೇಶಕ ಎಂ.ಜಿ.ದಾಸರ ಮಾತನಾಡಿ, ಮಕ್ಕಳ ಮಟ್ಟಕ್ಕೆ ಇಳಿದು ಪಾಠಭೋದನೆ ಮಾಡುವುದು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗುವ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಪೂರ್ವ ತಯಾರಿಯೊಂದಿಗೆ ಹಸನ್ಮುಖಿಯಿಂದ ಬೋಧನ ಉಪಕರಗಳನ್ನು ಬಳಸಿಕೊಂಡು ವರ್ಗ ಕೋಣೆಯಲ್ಲಿ ಪಾಠ ಭೋದಿಸಬೇಕು. ಮಕ್ಕಳಿಗೆ ಹುರುಪು ತುಂಬುವುದು, ಪ್ರೋತ್ಸಾಹಿಸುವುದು, ಚಿಕ್ಕ ಚಿಕ್ಕ ಬಹುಮಾನ ಕೊಡುವುದರ ಮೂಲಕ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಅಣಿ ಮಾಡಬೇಕು ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಬಸನಗೌಡ ಹರನಾಳ ಮಾತನಾಡಿ, ಶಾಲೆಯ ಸೊಬಗನ್ನು ಹೆಚ್ಚಿಸುವ ಕಾರ್ಯ ಮಾಡಬೇಕು. ಸೇವೆ ಸಲ್ಲಿಸಿದ ಶಾಲೆಯಲ್ಲಿ ತಮ್ಮ ಧನಾತ್ಮಕ ಅಂಶಗಳನ್ನು ಬಿಟ್ಟು ಬರುವಂತೆ ಎಲ್ಲರೂ ನೆನಪು ಇಟ್ಟುಕೊಳ್ಳುವಂತ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಕೋರೆ, ರವಿ ಪವಾರ, ಸುಭಾಸ ರಾಠೋಡ, ರಜಿಯಾಉದ್ದಿನ ರೋಜಿಂದಾರ, ಮಾಂತೇಶ ಭಾಪ್ರಿ, ಶ್ರೀಧರ ಕುಲಕರ್ಣಿ, ಅಮರಗೊಂಡ, ಸಿಆರ್‌ಪಿಗಳು ಹಾಗೂ ಮುಖ್ಯ ಗುರುಗಳು ಹಾಜರಿದ್ದರು. ರವೀಂದ್ರ ಚಿಕ್ಕಮಠ ನಿರೂಪಣೆ, ಪ್ರಭು ಬಿರಾದಾರ ಸ್ವಾಗತ ಹಾಗೂ ಎಸ್.ಡಿ. ಮೋಸಲಗಿ ವಂದನಾರ್ಪಣೆ ನೆರವೇರಿಸಿದರು.