ವೈದ್ಯ ಕಾಲೇಜು ಸೃಷ್ಟಿಸಿ, ಪಾಟೀಲರ ಇತಿಹಾಸ ಸೃಷ್ಟಿ

| Published : Aug 01 2024, 01:48 AM IST

ವೈದ್ಯ ಕಾಲೇಜು ಸೃಷ್ಟಿಸಿ, ಪಾಟೀಲರ ಇತಿಹಾಸ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಮಾನಗಳಲ್ಲಿ ಒಂದು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು ಎನ್ನುವುದು ಸಣ್ಣ ಕೆಲಸವಲ್ಲ. ಅದನ್ನು ಮಾಡಲು ಧೈರ್ಯ, ಮಹಾನ್ ವಿಚಾರಗಳು ಮೈಗೂಡಿರಬೇಕು. ಅಂತಹ ವಿಚಾರಗಳೊಂದಿಗೆ ಇಂದು ನಾಡಿಗೆ ಹೊಸ ವೈದ್ಯಕೀಯ ಕಾಲೇಜು ನೀಡಿ ಎಸ್.ಆರ್.ಪಾಟೀಲ ಅವರು ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಪ್ರಸ್ತುತ ದಿನಮಾನಗಳಲ್ಲಿ ಒಂದು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು ಎನ್ನುವುದು ಸಣ್ಣ ಕೆಲಸವಲ್ಲ. ಅದನ್ನು ಮಾಡಲು ಧೈರ್ಯ, ಮಹಾನ್ ವಿಚಾರಗಳು ಮೈಗೂಡಿರಬೇಕು. ಅಂತಹ ವಿಚಾರಗಳೊಂದಿಗೆ ಇಂದು ನಾಡಿಗೆ ಹೊಸ ವೈದ್ಯಕೀಯ ಕಾಲೇಜು ನೀಡಿ ಎಸ್‌.ಆರ್‌.ಪಾಟೀಲ ಅವರು ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿನ ಎಸ್.ಆರ್.ಪಾಟೀಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಏನಾದರೂ ಮಾಡಬೇಕು, ಜನ್ಮಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಸಾಗಿದ ಪಾಟೀಲರು ಇಂದು ಜಿಲ್ಲೆಯ ಬೀಳಗಿ ತಾಲೂಕಿನ ಪುಟ್ಟಹಳ್ಳಿ ಬಾಡಗಂಡಿಯಲ್ಲಿ ಮಹಾವಿದ್ಯಾಲಯ ಆರಂಭ ಮಾಡಿದ್ದು ಸಾಧಾರಣ ಕೆಲಸವಲ್ಲ. ನಮ್ಮದು ಶಿಕ್ಷಣ ಸಂಸ್ಥೆ, ಮಹಾವಿದ್ಯಾಲಯಗಳು ಇದ್ದು ಹಲವಾರು ವರ್ಷಗಳ ಸತತ ಪ್ರಯತ್ನದಿಂದ ವೈದ್ಯಕೀಯ ಮಹಾವಿದ್ಯಾಲಯದ ಅನುಮತಿ ನಮಗೆ ಸಿಕ್ಕಿತ್ತು. ಆದರೆ ಪಾಟೀಲರಿಗೆ ದೈವಬಲ, ಜನಬಲ ಹಾಗೂ ಐಶ್ವರ್ಯ ಬಲದಿಂದ ಸಮಾಜಕ್ಕೆ ಅವಳಿ ಜಿಲ್ಲೆಗಳಿಗೆ ಏನಾದರೂ ಮಾಡಬೇಕು ಎಂಬ ಅಚಲ ನಿರ್ಧಾರದಿಂದ 1ನೇ ಗುರುತಿಸುವಿಕೆಯಲ್ಲಿ ಪರವಾನಗಿ ಪಡೆದು ಇಂದು ನಾಡಿಗೆ ಮತ್ತೆ ಜನರಿಗೆ ೬೩೦ ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಕಾಣಿಕೆಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.

ಅತ್ಯುನ್ನತ ಸಾಧನೆ:

ಪೂರ್ವಜರು ಹೇಳುವ ಹಾಗೆ ಸಮಾಜ, ರಾಜ್ಯ ಸುಧಾರಣೆಯಾಗಬೇಕು ಎಂದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಹಾಗೆಯೇ ಪಾಟೀಲರು ೨೦೦೯ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಈ ಮಧ್ಯೆ ಕಾಂಗ್ರೆಸ್‌ ಹಿರಿಯ ನಾಯಕರಾದ ರಾಹುಲ್‌ ಗಾಂಧಿ ಅವರನ್ನು, ನಮ್ಮನ್ನು ಕರೆಸಿ ಶಿಕ್ಷಣ ಸಂಸ್ಥೆಯನ್ನು ಚಾಲನೆ ಸಿಗುವಂತೆ ಮಾಡಿದ್ದರು. ಸದ್ಯ ೨೦೨೪ರಲ್ಲಿ ಈ ಸಂಸ್ಥೆ ಎಲ್‌ಕೆಜಿಯಿಂದ ಎಂಬಿಬಿಎಸ್‌ವರೆಗೆ ಶಿಕ್ಷಣ ನೀಡುವಂತೆ ಆಗಿದೆ ಎಂದರೆ ಅದು ಅವರ ಅತ್ಯುನ್ನತ ಸಾಧನೆಯೇ ಸರಿ ಶ್ಲಾಘಿಸಿದರು.

ಅವಳಿ ಜಿಲ್ಲೆಯ ಮಧ್ಯೆಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ಆರಂಭವಾಗಿರುವ ಎಸ್‌.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಾಕಷ್ಟು ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಬರುವ ದಿನಮಾನಗಳಲ್ಲಿ ವಿಶ್ವವಿದ್ಯಾಲಯ ಆಗಲಿದೆ. ಈ ಕನಸನ್ನು ಎಸ್‌.ಆರ್‌.ಪಾಟೀಲರು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.ಹಿಂದೆ ೫೦೦೦ ಜನರಿಗೆ ೧ ಡಾಕ್ಟರ್ ಇರುವಂತ ಕಾಲ ಇತ್ತು. ಇಂದು ೧೦೦೦ ಜನಕ್ಕೆ ೧ ಡಾಕ್ಟರ್ ಇರುವ ಕಾಲ ಬಂದಿದೆ. ದೇಶದಲ್ಲಿ ೭೧೦ ವೈದ್ಯಕೀಯ ಕಾಲೇಜುಗಳು ಆರಂಭಗೊಂಡಿದ್ದು, ಪ್ರತಿ ವರ್ಷ ೧ ಲಕ್ಷ ಡಾಕ್ಟರ್‌ಗಳು ಬರಲಿದ್ದಾರೆ. ವಿಶ್ವದಲ್ಲಿ ಭಾರತ ಅತೀ ಹೆಚ್ಚು ಎಂಜಿನಿಯರ್‌, ಡಾಕ್ಟರ್ಸ್‌ ಅವರನ್ನು ಹೊಂದಿದ ದೇಶ ಎಂಬ ಹೆಸರು ಪಡೆದಿದೆ ಎಂದರು.

ಸಮಾರಂಭದ ಸಾನ್ನಿಧ್ಯವನ್ನು ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಪೀಠದ ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಸಮಾರಂಭದ ನೇತೃತ್ವವನ್ನು ಎರೆಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮಿಗಳು ವಹಿಸಿದ್ದರು. ವೈದ್ಯಕೀಯ ಮಹಾವಿದ್ಯಾಲಯದ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ನೆರವೇರಿಸಿದರು. ೬೩೦ ಹಾಸಿಗೆ ಸಾಮರ್ಥ್ಯದ ನವೀಕೃತ ಆಸ್ಪತ್ರೆ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ನೆರವೇರಿಸಿದರು.

ಶಸ್ತ್ರ ಚಿಕಿತ್ಸಾ ಕೊಠಡಿಗಳ ಉದ್ಘಾಟನೆಯನ್ನು ಸಂಸದ ಪಿ.ಸಿ.ಗದ್ದಿಗೌಡರ, ಸಿಟಿ ಸ್ಕ್ಯಾನ್‌ ಉದ್ಘಾಟನೆಯನ್ನು ವಿಪ ಸದಸ್ಯ ಪಿ ಎಚ್ ಪೂಜಾರ, ವಿಪ ಸದಸ್ಯ ಹಣಮಂತ ನಿರಾಣಿ ಸೇರಿದಂತೆ ಎಲ್ಲರೂ ಮಾತನಾಡಿದರು. ತೆರದಾಳ ಶಾಸಕ ಸಿದ್ದು ಸವದಿ, ಬಾಗಲಕೋಟೆಯ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ, ಬೆಳಗಾವಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ, ಡಾ.ನವೀನ ಎಸ್.ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಎಲ್‌.ಬಿ.ಕುರ್ತಕೋಟಿ, ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಾರ್ಯನಿರ್ವಾಹಕ ಎಸ್.ಸಿ.ಮೊಟಗಿ, ಡೀನ್ ಡಾ.ಧರ್ಮರಾಯ ಇಂಗಳೆ, ಅಧೀಕ್ಷಕ ಡಾ.ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಎಸ್ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ ಸ್ವಾಗತಿಸಿದರು.