ವ್ಯಸನ ಮುಕ್ತರಾಗಿ ಹೊಸ ಬದುಕು ರೂಪಿಸಿಕೊಳ್ಳಿ

| Published : Jul 31 2025, 12:50 AM IST

ಸಾರಾಂಶ

ಸಮಾಜದಲ್ಲಿ ತಲೆಎತ್ತಿ ಬದುಕಬೇಕಾದರೆ ಚಟದಿಂದ ಮುಕ್ತರಾಗಬೇಕು. ಸಮಾಜಪರ ಆಲೋಚನೆ ಮೂಲಕ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡು ಕೈಲಾದಷ್ಟು ಸಮಾಜಕ್ಕೆ ಕೊಡುಗೆ ನೀಡಬೇಕು.

ಕೊಪ್ಪಳ:

ಭಾಗ್ಯನಗರದ ಅರುಣೋದಯ ವ್ಯಸನ ಮುಕ್ತಿ ಹಾಗೂ ಪರಿವರ್ತನಾ ಕೇಂದ್ರದಲ್ಲಿ ನಾಗರ ಪಂಚಮಿ ನಿಮಿತ್ತ ಶಿಬಿರಾರ್ಥಿಗಳ ಮನಪರಿವರ್ತನೆಗಾಗಿ ಜೀವನ ಜೋಕಾಲಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹರ್ತಿ, ಚಟದಿಂದ ಮುಕ್ತರಾಗಿ ಸುಂದರ ಸಂಸಾರದೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು. ನಡೆಯುವ ಮನುಷ್ಯ ಎಡವಲೇಬೇಕು. ಬದುಕಿನುದ್ದಕ್ಕೂ ಬರುವ ಸಮಸ್ಯೆ, ಸವಾಲು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಸಮಸ್ಯೆ, ಸಹವಾಸದಿಂದ ಮತ್ತು ಮಾನಸಿಕ ಖಿನ್ನತೆಯ ನೋವಿನಲ್ಲಿ ತಾವುಗಳು ಚಟಗಳಿಗೆ ಬಲಿಯಾಗಿರಬಹುದು. ಎಲ್ಲವನ್ನೂ ಮರೆತು ಸುಖ ಸಂಸಾರದೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಿ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಪ್ರಜ್ಞಾವಂತರಾಗಿ ಬದುಕಬೇಕೆಂದು ಹೇಳಿದರು.

ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಸಮಾಜದಲ್ಲಿ ತಲೆಎತ್ತಿ ಬದುಕಬೇಕಾದರೆ ಚಟದಿಂದ ಮುಕ್ತರಾಗಬೇಕು. ಸಮಾಜಪರ ಆಲೋಚನೆ ಮೂಲಕ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡು ಕೈಲಾದಷ್ಟು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಜೀವನದಲ್ಲಿ ಸೋತು ಗೆದ್ದವರೆ ಹೆಚ್ಚು. ಸಮಯ ಮತ್ತು ಕಾಯಕ ತತ್ವದಿಂದ ತಮ್ಮ ಬದುಕು ಹಸನಾಗಿಸಿಕೊಳ್ಳಿ. ವ್ಯಸನಮುಕ್ತರಾಗಿ ಮನಪರಿವರ್ತನೆಗೊಂಡು ಕುಟುಂಬಕ್ಕೆ ಆಧಾರಸ್ತಂಭವಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬದುಕಬೇಕೆಂದು ಕರೆ ನೀಡಿದರು. ಇದೇ ವೇಳೆ ಜಾನಪದ ಗೀತೆಗಳ ಮೂಲಕ ಶಿಬಿರಾರ್ಥಿಗಳನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಭೀರಪ್ಪ ಅಂಡಗಿ, ಬಿ.ಎನ್. ಹೊರಪೇಟಿ, ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ಶರಣಪ್ಪ ಸಿಂಗನಾಳ, ಪ್ರತಿಭಾ ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳು ಮುಕ್ತವಾಗಿ ಮಾತನಾಡಿ, ತಪ್ಪಿನ ಅರಿವಾಗಿದೆ. ವ್ಯಸನಮುಕ್ತರಾಗಿ ಬದುಕುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಗವಿಸಿದ್ದಯ್ಯ ದಂಪತಿಗಳಿಗೆ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ರಾಜಕುಮಾರ ಕೊರವರ, ಮೈಲಪ್ಪ ಮತ್ತಿರರು ಉಪಸ್ಥಿತಿ ಇದ್ದರು.