ಚಿತ್ರದುರ್ಗ ತಾಲೂಕಿನ ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಪೋಷಕ ಮತ್ತು ಶಿಕ್ಷಕರ ಮಹಾಸಭೆ-2ನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ಪೋಷಕರು ಸಹಕರಿಸುವ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕೂನಬೇವು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಹನುಮಂತಪ್ಪ ತಿಳಿಸಿದರು.

ಚಿತ್ರದುರ್ಗ ತಾಲೂಕಿನ ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಪೋಷಕ ಮತ್ತು ಶಿಕ್ಷಕರ ಮಹಾಸಭೆ-2ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಸಂಜೆ ಗುಂಪು ಅಧ್ಯಯನ ಹಾಗೂ ಪ್ರತಿ ಭಾನುವಾರ ವಿಶೇಷ ತರಗತಿಗಳನ್ನು ನಡೆಸುತ್ತಿದ್ದು 10ನೇ ತರಗತಿ ವಿದ್ಯಾರ್ಥಿಗಳಿಗೆ ಪೋಷಕರು ಮನೆಯಲ್ಲಿ ಮೊಬೈಲ್ ನೀಡದೆ ಮತ್ತು ದೂರದರ್ಶನದಿಂದ ದೂರವಿರುವಂತೆ ನೋಡಿಕೊಳ್ಳುವುದು ಮುಖ್ಯ. ಅದು ಅವರ ಕರ್ತವ್ಯ. ಪೋಷಕರ ಸಹಕಾರವಿಲ್ಲದೆ ಶಿಕ್ಷಕರು ಮಾಡುವ ಪ್ರಯತ್ನ ಪೂರ್ಣಗೊಳ್ಳುವುದಿಲ್ಲ ಎಂದರು.

ಶಿಕ್ಷಕ ಮಾರುತಿ ಪ್ರಸಾದ್ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆಯು 10ನೇ ತರಗತಿಯವರಿಗೆ ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲಾ ವಿಷಯವಾರು ಸಹ ಶಿಕ್ಷಕರು ನೀಲ ನಕ್ಷೆ ಹಾಗೂ ಮಂಡಳಿಯಿಂದಲೇ ಬಿಡುಗಡೆಗೊಳಿಸಿದ ಪ್ರಶ್ನೆ ಪತ್ರಿಕೆಯೊಂದಿಗೆ ಮಾದರಿ ಉತ್ತರಗಳನ್ನು ನೀಡಿದ್ದು ಅವುಗಳನ್ನು ತಪ್ಪದೇ ಮನೆಯಲ್ಲಿ ಮಕ್ಕಳು ಅಭ್ಯಾಸ ಮಾಡುವಂತೆ ಪೋಷಕರು ಗಮನಹರಿಸಬೇಕೆಂದು ತಿಳಿಸಿದರು.

ಶಿಕ್ಷಕ ಎಸ್.ಕೃಷ್ಣ ಮಾತನಾಡಿ, 10ನೇ ತರಗತಿಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ತಿರುವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ವಿಶೇಷವಾಗಿ ಬಾಲಕರು ಕಲಿಕೆಯಲ್ಲಿ ಹಿಂದುಳಿದಿದ್ದು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಕೆಂಚಪ್ಪ ಹಾಗೂ ಎಸ್ ಡಿಎಂಸಿ ಸದಸ್ಯರು, ಪೋಷಕರು ಮತ್ತು ಶಾಲಾ ಸಹ ಶಿಕ್ಷಕರು ಹಾಜರಿದ್ದರು.