ಕುರಿ-ಮೇಕೆ ಸಂಬಂಧಿಸಿದ ಪ್ರತ್ಯೇಕ ಇಲಾಖೆ ರಚಿಸಿ: ಚಿದ್ರಿ ಒತ್ತಾಯ

| Published : Jun 27 2024, 01:01 AM IST

ಕುರಿ-ಮೇಕೆ ಸಂಬಂಧಿಸಿದ ಪ್ರತ್ಯೇಕ ಇಲಾಖೆ ರಚಿಸಿ: ಚಿದ್ರಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿ ಹಾಗೂ ಮೇಕೆ ಸಾಕಾಣಿಕೆದಾರರ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಬೀದರ್

ಕುರಿ ಮತ್ತು ಮೇಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರತ್ಯೇಕ ಇಲಾಖೆ ರಚಿಸಿ, ನಿರ್ದೇಶಕರನ್ನು ನೇಮಕ ಮಾಡಬೇಕೆಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ನಿರ್ದೇಶಕ ಪಂಡಿತರಾವ್ ಚಿದ್ರಿ ಒತ್ತಾಯಿಸಿದರು.

ರಾಜ್ಯದ ಕುರಿಗಾರರ ಸಮಸ್ಯೆಗಳ ಕುರಿತು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಛತ್ತೀಸ್‌ಗಡ್, ಜಮ್ಮು-ಕಾಶ್ಮೀರ್ ಮತ್ತಿತರ ಕುರಿ ಹಾಗೂ ಮೇಕೆಗಳ ಸಂಖ್ಯೆ ಕಡಿಮೆ ಇರುವ ರಾಜ್ಯಗಳಲ್ಲೂ ಕುರಿ ಮತ್ತು ಮೇಕೆ ಹಾಗೂ ಪಶು ಸಂಗೋಪನೆಗೆ ಪ್ರತ್ಯೇಕ ಇಲಾಖೆ ಇವೆ. ಕುರಿಗಾರರು ಹಾಗೂ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡವರ ಹಿತರಕ್ಷಣೆಗೆ ರಾಜ್ಯದಲ್ಲೂ ಅದೇ ಮಾದರಿ ಅನುಸರಿಸ ಬೇಕಾದ ಅಗತ್ಯವಿದೆ ಎಂದು ಮನವರಿಕೆ ಮಾಡಿದರು.

ಮೊದಲು ನಾಟಿ ಕೋಳಿಗಳಷ್ಟೇ ಇದ್ದವು. ಸಂಶೋಧನೆಗಳ ಪರಿಣಾಮವಾಗಿ ಫಾರಂ ಕೋಳಿಗಳು ಬಂದ ನಂತರ ಕೋಳಿ ಮಾಂಸದ ಕೊರತೆ ನೀಗಿತು. ದೇಸಿ ಆಕಳು, ಎಮ್ಮೆಗಳಿಂದ ಉತ್ಪಾದನೆಯಾಗುತ್ತಿದ್ದ ಹಾಲು ಸಾಕಾಗದಿದ್ದಾಗ ಹೆಚ್ಚು ಹಾಲು ಕೊಡುವ ಎಮ್ಮೆ, ಆಕಳ ತಳಿಗಳ ಸಂಶೋಧನೆ ಮಾಡಲಾಯಿತು. ಅದರಿಂದ ಜನರ ಬೇಡಿಕೆಯಷ್ಟು ಹಾಲು ದೊರಕಲು ಸಾಧ್ಯವಾಯಿತು. ಇದೀಗ ಕುರಿ ಮತ್ತು ಮೇಕೆಗಳ ಮಾಂಸದ ಅಭಾವ ನೀಗಿಸಲು ಕುರಿ ಮತ್ತು ಮೇಕೆ ಕುರಿತು ಹೊಸ ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದು ಗಮನ ಸೆಳೆದರು.

ಕುರಿ, ಮೇಕೆಯಲ್ಲಿ ಹೆಚ್ಚು ಮರಿ ಕೊಡುವ, ಬೇಗ ಬೆಳೆಯುವ, ಅಧಿಕ ಮಾಂಸ ಉತ್ಪಾದಿಸುವ ತಳಿಗಳ ಸಂಶೋಧನೆಯಾದರೆ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಲಾಭವಾಗಲಿದೆ. ಕುರಿ ಮತ್ತು ಮೇಕೆ ಮಾಂಸ ಹೆಚ್ಚು ಉತ್ಪಾದನೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಮ್ಮ ಸಲಹೆಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಂಡಿತರಾವ್ ತಿಳಿಸಿದ್ದಾರೆ.

ಪಶು ಸಂಗೋಪನೆ ಇಲಾಖೆ ಸಚಿವ ವೆಂಕಟೇಶ, ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ನಿರ್ದೇಶಕರು, ಅಧಿಕಾರಿಗಳು ಇದ್ದರು.