ಸಾರಾಂಶ
ಸಿದ್ದಾಪುರ: ಧರ್ಮಸ್ಥಳವು ನಾಡಿನ ಅಭಿವೃದ್ಧಿ ಮತ್ತು ಸ್ವಾಸ್ಥ್ಯ ಕಾಪಾಡಲು ಹಲವು ಅತ್ಯುತ್ತಮ ಯೋಜನೆ ಹಮ್ಮಿಕೊಳ್ಳುತ್ತಾ ಬಂದಿದೆ. ಅದರಲ್ಲಿ ಮದ್ಯವರ್ಜನ ಶಿಬಿರದಂಥ ಕಾರ್ಯವೂ ಬಹುಮುಖ್ಯವಾದದ್ದು ಎಂದು ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.
ಅವರು ಪಟ್ಟಣದ ಶಂಕರಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪ್ರಗತಿಬಂಧು ಸ್ವಸಹಾಯ ಒಕ್ಕೂಟ ಮುಂತಾದ ಹಲವು ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೧೯೯೬ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರ ಮಾಡದಿರುವ ಕಾರ್ಯವನ್ನು ಧರ್ಮಸ್ಥಳ ಮಾಡುತ್ತಿದೆ. ವ್ಯಸನಮುಕ್ತ ಸಮಾಜ ರೂಪಿಸುವ, ಮದ್ಯಪಾನದಿಂದ ಆಗುವ ದುಷ್ಪರಿಣಾಮವನ್ನು ತಡೆಯುವ ನಿಟ್ಟಿನಲ್ಲಿ ಸಾವಿರಾರು ಶಿಬಿರಗಳನ್ನು ನಡೆಸಿದೆ. ವ್ಯಸನಿಗಳು ಈ ಶಿಬಿರದಿಂದ ತಮ್ಮ ಜೀವನ ಉತ್ತಮ ಪಡಿಸಿಕೊಳ್ಳಬೇಕು. ಧರ್ಮವಿರೋಧಿಗಳು ಕ್ಷೇತ್ರದ ಕುರಿತು ಕುತಂತ್ರ ನಡೆಸುತ್ತಿದ್ದು ನಮ್ಮ ಮಿತಿಯಲ್ಲಿ ಕ್ಷೇತ್ರದ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಮುಖ್ಯ ಅತಿಥಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲೆ ನಿರ್ದೇಶಕ ದಿನೇಶ ಎಂ.ಮಾತನಾಡಿ, ಗ್ರಾಮಗಳ ಶುದ್ಧತೆಯಾದರೆ ನಾಡಿನ ಶುದ್ಧತೆಯಾದಂತೆ. ದೇಹದ ಶುದ್ಧತೆಗಾಗಿ ಹಮ್ಮಿಕೊಂಡ ಮದ್ಯವರ್ಜನ ಶಿಬಿರ ವ್ಯಸನಪೀಡಿತ ವ್ಯಕ್ತಿಯ ಹಾಗೂ ಆತನ ಕುಟುಂಬದ ಒಳಿತಿಗಾಗಿ ರೂಪುಗೊಂಡಿದೆ. ಶರೀರದ ಆರೋಗ್ಯ,ಕೌಟುಂಬಿಕ ಸೌಖ್ಯವನ್ನು ನಾಶ ಮಾಡುವ ಮದ್ಯಪಾನದಿಂದ ವ್ಯಸನಪೀಡಿತ ವ್ಯಕ್ತಿಯನ್ನು ಮುಕ್ತಗೊಳಿಸುವ ಸದುದ್ದೇಶದಿಂದ ವಿರೇಂದ್ರ ಹೆಗ್ಗಡೆ ರೂಪಿಸಿದ ಇಂಥ ಶಿಬಿರಗಳು ಸಾವಿರಾರು ಜನರಿಗೆ ಹೊಸ ಬದುಕನ್ನು ಕೊಟ್ಟಿದೆ. ಅನೇಕ ಸತ್ಕಾರ್ಯಗಳನ್ನು ನಡೆಸುತ್ತಿದೆ. ಎಂಟು ದಿನಗಳ ಈ ಶಿಬಿರ ವ್ಯಸನಿಗಳಿಗೆ ಹೊಸ ಬದುಕನ್ನು ನೀಡಲಿದೆ ಎಂದರು.ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟೇಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರಸಿ ಜಿಲ್ಲೆ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಗೌರಿ ನಾಯ್ಕ,ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಸುಭಾಷ ನಾಯ್ಕ ಕಾನಸೂರು, ಸದಸ್ಯರಾದ ಶ್ರೀಮತಿ ಲಕ್ಷ್ಮೀರಾಜ, ರಮೇಶ ಹೆಗಡೆ ಹಾರ್ಸಿಮನೆ,ಶಂಕರ ಭಟ್ಟ,ಗಣಪತಿ ಗೌಡ,ವಿವೇಕಾನಂದ ರಾಯ್ಕರ್ ಶಿರಸಿ ಹಾಗೂ ಪಿ.ಬಿ.ಹೊಸೂರ,ಯಶೋಧ ಮಡಿವಾಳ, ಅನಿತಾ ನಾಯ್ಕ,ಸುಮಾ ಕೋಲಸಿರ್ಸಿ,ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ,ಆರ್.ಕೆ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ಗಿರೀಶ ಜಿ.ಪಿ.ಸ್ವಾಗತಿಸಿದರು. ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಗಣೇಶ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು.ಸುಜಾತಾ ಸಂಗಡಿಗರು ಪ್ರಾರ್ಥಿಸಿದರು. ಯೋಜನೆಯ ಕೃಷಿ ಅಧಿಕಾರಿ ಮಹಾದೇವ ಬಿ. ನಿರೂಪಿಸಿದರು.ಸಿದ್ದಾಪುರದ ಶಂಕರಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಮ್ಮಿಕೊಂಡ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು.