ಹೂಡಿಕೆದಾರರಿಗೆ ಅನುಕೂಲ ವಾತಾವರಣ ಕಲ್ಪಿಸಿ: ಡೀಸಿ ಶುಭ ಕಲ್ಯಾಣ್

| Published : May 24 2024, 12:45 AM IST

ಹೂಡಿಕೆದಾರರಿಗೆ ಅನುಕೂಲ ವಾತಾವರಣ ಕಲ್ಪಿಸಿ: ಡೀಸಿ ಶುಭ ಕಲ್ಯಾಣ್
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಉದ್ದೇಶಿತ 6 ಗ್ರಾಮಗಳ ಸುಮಾರು 1,722 ಎಕರೆ ವಿಸ್ತೀರ್ಣದಲ್ಲಿ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಕೈಗೊಳ್ಳಲಾಗಿದೆ. ಯೋಜನೆಯ ಅಭಿವೃದ್ಧಿಗಾಗಿ ನ್ಯಾಯಾಲಯ ಪ್ರಕರಣ ಹೊರತುಪಡಿಸಿ ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ತಾಲೂಕಿನ ಬೆಳ್ಳಾವಿ ಹೋಬಳಿಯ ಸೋರೆಕುಂಟೆ, ಪಿ.ಗೊಲ್ಲಹಳ್ಳಿ, ಪುರದಕುಂಟೆ, ಗೌಡನಹಳ್ಳಿ, ಲಿಂಗನಹಳ್ಳಿ, ಗಿರಿಯನಹಳ್ಳಿ ಸೇರಿ 6 ಗ್ರಾಮಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ವಾತಾವರಣವನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋರೆಕುಂಟೆ ಗ್ರಾಮದ ವ್ಯಾಪ್ತಿಯಲ್ಲಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಬೃಹತ್ ಯೋಜನೆಯಡಿ ಕೈಗೊಂಡಿರುವ ಕೈಗಾರಿಕಾ ಪ್ರದೇಶಾಭಿವೃದ್ಧಿಯನ್ನು ಪರಿವೀಕ್ಷಿಸಲು ಭೇಟಿ ನೀಡಿ ಮಾತನಾಡಿದ ಅವರು, ಬಂಡವಾಳ ಹೂಡಿಕೆದಾರರು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತಮ ಸೌಲಭ್ಯಗಳಿರುವ ಪ್ರದೇಶಗಳಿಗೆ ಆದ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಉತ್ತಮ ರಸ್ತೆ, ನೀರು, ಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ನಿರ್ದೇಶನ ನೀಡಿದರು.

ಕೆಐಎಡಿಬಿ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಎಸ್. ಲಕ್ಷ್ಮೀಶ್ ಮಾತನಾಡಿ, ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಉದ್ದೇಶಿತ 6 ಗ್ರಾಮಗಳ ಸುಮಾರು 1,722 ಎಕರೆ ವಿಸ್ತೀರ್ಣದಲ್ಲಿ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಕೈಗೊಳ್ಳಲಾಗಿದೆ. ಯೋಜನೆಯ ಅಭಿವೃದ್ಧಿಗಾಗಿ ನ್ಯಾಯಾಲಯ ಪ್ರಕರಣ ಹೊರತುಪಡಿಸಿ ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಯೋಜನೆಯ ಕಾಮಗಾರಿಯ ಗುತ್ತಿಗೆಯನ್ನು ಮೆ। ಎಲ್ ಅಂಡ್ ಟಿ ಕಂಪನಿ ವಹಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಸೋರೆಕುಂಟೆ ಗ್ರಾಮದ ಸರ್ವೇ ನಂಬರ್ 41/36 ಜಮೀನಿನ ಈಶ್ವರಯ್ಯ ಎಂಬ ರೈತನು ಕೆಐಎಡಿಬಿಯವರು ತನ್ನ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಜಮೀನಿನಲ್ಲಿರುವ ಕೊಳವೆ ಬಾವಿಗೆ ವರ್ಷಗಳಿಂದ ಅಲೆದಾಡುತ್ತಿದ್ದರೂ ಪರಿಹಾರ ನೀಡಿರುವುದಿಲ್ಲ. ನ್ಯಾಯ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದಾಗ, ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇನ್ನೆರಡು ದಿನಗಳಲ್ಲಿ ಸದರಿ ರೈತನಿಗೆ ಪರಿಹಾರ ಒದಗಿಸುವ ಕಾರ್ಯವಾಗಬೇಕು. ಸ್ವಾಧೀನಪಡಿಸಿಕೊಂಡ ಭೂ ಮಾಲೀಕರಿಗೆ ಪರಿಹಾರ ಬಾಕಿ ಉಳಿಸಿಕೊಳ್ಳದೇ ಶೀಘ್ರ ಪಾವತಿಸಲು ಕ್ರಮ ಕೈಗೊಳ್ಳಬೇಕು. ರೈತರ ವಿಶ್ವಾಸವನ್ನು ಗಳಿಸಿ ಕೆಲಸ ಮಾಡಬೇಕೆಂದು ಸೂಚಿಸಿದರು.

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ ಕೈಗೊಂಡಿರುವ ಸೋರೆಕುಂಟೆ, ಪಿ.ಗೊಲ್ಲಹಳ್ಳಿ, ಪುರದಕುಂಟೆ, ಗೌಡನಹಳ್ಳಿ, ಲಿಂಗನಹಳ್ಳಿ, ಗಿರಿಯನಹಳ್ಳಿ ಗ್ರಾಮಗಳ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ರೈತರು ತಮ್ಮ ಸಮಸ್ಯೆ, ಅಹವಾಲುಗಳನ್ನು ಸಹಾಯವಾಣಿ ಸಂಖ್ಯೆ 0816-2213404ಕ್ಕೆ ಕರೆ ಮಾಡುವ ಮೂಲಕ ಸಲ್ಲಿಸಬಹುದಾಗಿದೆ ಅಥವಾ ಮೇ ೨೮ರಂದು ಬೆಳಿಗ್ಗೆ ೧೧ ರಿಂದ ೧ ಗಂಟೆಯೊಳಗಾಗಿ ಭೂ ಸ್ವಾಧೀನವಾಗಿರುವ ರೈತರು ಖುದ್ದಾಗಿ, ಜಿಲ್ಲಾಧಿಕಾರಿಗಳಿಗೆ ಲಿಖಿತ ಅರ್ಜಿ ಮೂಲಕ ತಮ್ಮ ಸಮಸ್ಯೆಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ರಸ್ತೆ ಕುಸಿತದ ಮಾಹಿತಿ ಬಂದ ಕೂಡಲೇ ಗುಂಡಿಯನ್ನು ಮುಚ್ಚಲಾಗಿದೆ. ತಜ್ಞರ ಸಲಹೆ ಪಡೆದು ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮವಹಿಸಲಾಗುವುದೆಂದು ತಿಳಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮದ ಹಿರಿಯ ವ್ಯವಸ್ಥಾಪಕ ರೋಹಿತ್ ಉಪಾಧ್ಯಾಯ್, ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಪ್ರಸನ್ನ ಕುಮಾರ್, ರವಿಕುಮಾರ್ ಹಾಗೂ ಸಿಬ್ಬಂದಿ ವರ್ಗ, ಎಲ್ ಅಂಡ್ ಟಿ ಕಂಪನಿಯ ಮ್ಯಾನೇಜರ್ ಶ್ರೀಕಾಂತ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ:

ಶೆಟ್ಟಿಹಳ್ಳಿ ರಸ್ತೆ ಪಕ್ಕದಲ್ಲೇ ಇದ್ದ ರೈಲು ಹಳಿಗಳನ್ನು ನಿರ್ಭಯವಾಗಿ ದಾಟುತ್ತಿದ್ದ ಜನರನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಸುರಕ್ಷತೆಗಾಗಿ ಕ್ರಮಕೈಗೊಳ್ಳಬೇಕು. ಸದರಿ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದರಲ್ಲದೇ ಇದೇ ರೀತಿ ಸುರಕ್ಷತಾ ಕ್ರಮಕೈಗೊಳ್ಳದಿರುವ ಸ್ಥಳಗಳ ಪಟ್ಟಿ ಮಾಡಿ ತಮಗೆ ನೀಡಬೇಕೆಂದು ಪಾಲಿಕೆಗೆ ಸೂಚನೆ ನೀಡಿದರು. ನಂತರ ನಗರದ ಭದ್ರಮ್ಮ ವೃತ್ತದ ಬಳಿ ಚರಂಡಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಧಾರಕಾರ ಮಳೆಯಿಂದ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಿಂದ ದೂರು ಬರುತ್ತಿವೆ. ಚರಂಡಿ ಸುತ್ತ ಫೆನ್ಸಿಂಗ್ ಅಳವಡಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿಯಲ್ಲಿ ಕಸ-ಕಡ್ಡಿಗಳನ್ನು ತೆರವು ಮಾಡಬೇಕೆಂದು ನಿರ್ದೇಶನ ನೀಡಿದರು. ಅಂತರಸನಹಳ್ಳಿಯ ಕೆಳಸೇತುವೆಯಲ್ಲಿ ಮಳೆ ನೀರು ನಿಲ್ಲದಂತೆ ರಸ್ತೆಯನ್ನು ಸರಿಪಡಿಸಬೇಕೆಂದು ಪಾಲಿಕೆಗೆ ಸೂಚಿಸಿದರು.