ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಸರ್ಕಾರಿ ನೌಕರರು ಮತ್ತು ಶಿಕ್ಷಕರು ಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಿರ್ಭೀತಿಯಿಂದ ಸ್ವತಂತ್ರ್ಯವಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಸುವುದು ಸಂಘಟನೆ ಕರ್ತವ್ಯವಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಹೇಳಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 102 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ನೌಕರರ ಸಂಘವು ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ಇಲಾಖೆಗಳ ಸಂಘಟನೆಗಳನ್ನು ಜೊತೆಗೂಡಿಸಿಕೊಂಡು 28 ಇಲಾಖೆಗಳ ನೌಕರರ ಹಿತಾಸಕ್ತಿ ಕಾಯುವ ಜೊತೆಗೆ ಸೇವಾ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ಕಳೆದ 10 ವರ್ಷಗಳಲ್ಲಿ ತಾಲೂಕು ಸಂಘದಿಂದ ಸರ್ಕಾರಿ ನೌಕರರ ಹಿತಕಾಯುವ ಕಾಯುವ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ನೂತನವಾಗಿ ಅಧಿಕಾರಕ್ಕೆ ಬಂದಿರುವ ಆಡಳಿತ ಮಂಡಳಿಗೆ ಈ ಹಿಂದಿನ ಆಡಳಿತ ಮಂಡಳಿಯು ಆಡಿಟ್ ವರದಿ, ನಡಾವಳಿ ಪುಸ್ತಕ, ಆದಾಯ ನಷ್ಟದ ಮಾಹಿತಿ ಸೇರಿದಂತೆ ಪ್ರಮುಖ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಹಸ್ತಾಂತರಿಸಿಲ್ಲ. ಹಾಗಾಗಿ ಕಳೆದ 10 ವರ್ಷಗಳಲ್ಲಿ ಸಂಘದಲ್ಲಿ ನಡೆದಿರುವ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನೊಳಗೊಂಡ ಎಲ್ಲಾ ದಾಖಲಾತಿಗಳನ್ನು ಕೊಡಿಸಿಕೊಡಬೇಕೆಂದು ಜಿಲ್ಲಾ ಮತ್ತು ರಾಜ್ಯ ಸಂಘಕ್ಕೆ ಮನವಿ ಮಾಡಲಾಗಿದೆ ಎಂದರು.ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗ ಸಂಘದ ಬ್ಯಾಂಕ್ ಖಾತೆಯಲ್ಲಿ ಕೇವಲ 762 ರು. ಮಾತ್ರ ಹಣವಿತ್ತು. ಆಡಳಿತ ಮಂಡಳಿ ಮತ್ತು ಸಂಘದ ಸದಸ್ಯರ ಸಹಕಾರದಿಂದ 5 ತಿಂಗಳಲ್ಲಿ ಮಹಿಳಾ ದಿನಾಚರಣೆ, ಸರ್ಕಾರಿ ನೌಕರರ ದಿನಾಚರಣೆ, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ನಾಗೇಶ್ ಮಾತನಾಡಿ, ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸುತ್ತಿದೆ ಎಂದರು.ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್.ಜಗನ್ನಾಥ್ ಪ್ರಾಸ್ತಾವಿಕ ನುಡಿ ನುಡಿದರು. ಕಳೆದ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದಿದ ಸರ್ಕಾರಿ ನೌಕರರು ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಬಿಇಒ ಲೋಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಡಿ.ಕೆ.ವಿನಯ್ ಸೇರಿದಂತೆ ಸರ್ಕಾರಿ ನೌಕರರ ಸಂಘ ಮತ್ತು ವೃಂದ ಸಂಘಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.