ಅಪಘಾತ ತಡೆಗೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ

| Published : Feb 16 2025, 01:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಪಘಾತ ತಡೆಯುವ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಡ್ಡಾಯವಾಗಿ ರಸ್ತೆ ನಿಯಮಗಳ ಪಾಲನೆ ಮಾಡುವಂತೆ ವಾಹನ ಸವಾರರು, ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸೋಲಾಪೂರ ಬೈಪಾಸ್ ಸರ್ಕಲ್‌ನಲ್ಲಿ ಅಂಗಡಿಕಾರರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಲ್ಲದೇ, ರಸ್ತೆಯ ಮುಂಭಾಗ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಒತ್ತುವರಿಯಾದ ರಸ್ತೆಯನ್ನು ತೆರವುಗೊಳಿಸಲು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು, ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ವಹಿಸಬೇಕು. ಸೋಲಾಪೂರ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಒನ್‌ ವೇ ಇದ್ದು, ಅರಕೇರಿ, ಉಮದಿ ರಸ್ತೆ ಕಡೆಯಿಂದ ಒನ್‌ ವೇ ಉಲ್ಲಂಘಿಸಿ ಎದುರಿಗೆ ಬರುವ ವಾಹನಗಳ ಸಂಚಾರದಿಂದ ಅಪಘಾತಗಳಾಗುವ ಸಂಭವವಿದೆ. ಈ ಹಿನ್ನಲೆಯಲ್ಲಿ ಈ ರಸ್ತೆಯ ಸಂಚಾರ ನಿರ್ಬಂಧ ಅವಶ್ಯವಾಗಿದೆ. ಸೋಲಾಪೂರ ಕಡೆಗೆ ಹೋಗುವ ಪ್ರಯಾಣಿಕರ ಸಲುವಾಗಿ ರಸ್ತೆಯ ಎಡಬದಿಗೆ ಲಘು ಬಸ್‌ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಲ್‌ನ ನಾಲ್ಕು ಕಡೆಗಳಲ್ಲಿ ಸಿಸಿಟಿವ್ಹಿ ಅಳವಡಿಸುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಅಂಡರ್‌ಪಾಸ್ ಕೆಳಗಡೆ ಬೃಹತ್ ವಾಹನಗಳನ್ನು ಕಾರ್, ಬೈಕ್‌ಗಳನ್ನು ನಿಲ್ಲಿಸುತ್ತಿದ್ದು, ಈ ಬಗ್ಗೆ ಅಂಡರ್‌ಪಾಸ್ ಕೆಳಗೆ ಇರುವ ಖಾಲಿ ಜಾಗೆಯನ್ನು ಇಳಿಜಾರು ಜಾಗೆಯನ್ನಾಗಿ ಮಾಡಿ ಖಾಲಿ ಇರುವ ಸ್ಥಳದಲ್ಲಿ ಪಾರ್ಕಿಂಗ್ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ವಿವಿಧೆಡೆ ಇರುವ ವೃತ್ತಗಳಲ್ಲಿ ಸೂಚನಾ ಫಲಕ ಹಾಗೂ ಮಾರ್ಗಸೂಚಿಗಳನ್ನು ಅಳವಡಿಸಬೇಕು ಎಂದು ಹೇಳಿದರು.

ಇಂಡಿ ಅಂಡರ್ ಬೈಪಾಸ್ ಸ್ಥಳದಲ್ಲಿ ಇಂಡಿ ಕಡೆಯಿಂದ ಏಖಮುಖ ರಸ್ತೆಗೆ ವಿರುದ್ದವಾಗಿ ವಾಹನಗಳು ಬಂದು ಪ್ರಮುಖ ರಸ್ತೆಗೆ ಹಾಗೂ ಸೋಲಾಪೂರ ಕಡೆಯಿಂದ ಇಂಡಿ ಕಡೆಗೆ ಹೋಗುವ ವಾಹನಗಳು ಸರ್ವೀಸ್ ರೋಡ್‌ ಸಂಪರ್ಕಿಸುವ ಸ್ಥಳದಲ್ಲಿ ಡಿವೈಡರ್ ಅಂತರ ಕಡಿಮೆ ಮಾಡಬೇಕು. ಇಂಡಿ ಅಂಡರ್‌ಪಾಸ್‌ದಲ್ಲಿ ಅಂಗಡಿಕಾರರು ರಸ್ತೆಯನ್ನು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕೋಲ್ಹಾರ ಸೇತುವೆ ಮೇಲೆ ಬೀದಿ ದೀಪಗಳನ್ನು ಹಾಗೂ ಸುಮಾರು ಹತ್ತು ಸಿಸಿಟಿವಿ ಅಳವಡಿಸಬೇಕು. ನಗರದಲ್ಲಿ ವಾಹನ ದಟ್ಟಣೆ ತಡೆ, ಅವಶ್ಯಕತೆ ಇರುವಲ್ಲಿ ಸೂಚನಾ ಫಲಕ ಹಾಗೂ ಮಾಹಿತಿ ಫಲಕ ಅಳವಡಿಸುವುದು. ಸಿಂದಗಿ ಅಂಡರ್‌ಪಾಸ್‌ ಸರ್ಕಲ್‌ನಲ್ಲಿ ಸಿಂದಗಿ ಕಡೆಯಿಂದ ಎನ್‌ಎಚ್ ರಸ್ತೆ ಸೇರುವ ಈಡಿee ಐeಜಿಣ ಕಡೆ ಹೋಗುವ ಸ್ಥಳದಲ್ಲಿ ಟೈರ್ ಅಂಗಡಿಯವರು ರಸ್ತೆಯನ್ನು ಒತ್ತುವರಿ ಮಾಡಿದ್ದಾರೆ. ಅದನ್ನು ತೆರವುಗೊಳಿಸುವ ಅವಶ್ಯಕತೆ ಇದ್ದು, ನಗರದ ಕೆಲವು ರಸ್ತೆಗಳ ಸುಧಾರಣೆ ಮಾಡುವುದರ ಜೊತೆಗೆ ರಸ್ತೆಯ ತಳಮಟ್ಟವನ್ನು ಹೆಚ್ಚಿಸಿ ಸುಧಾರಣೆ ಕೈಕೊಳ್ಳಬೇಕಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಮುಂತಾದವರು ಇದ್ದರು.

ಕೋಟ್್‌

ವಿಜಯಪುರ - ಸೋಲಾಪೂರ ರಸ್ತೆ ಐಒಸಿ ಹತ್ತಿರ ಸೋಲಾಪೂರ ಕಡೆಯಿಂದ ಆಗಮಿಸುವ ವಾಹನಗಳು ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಹೋಗುವ ಸಂದರ್ಭದಲ್ಲಿ ಸರ್ವೀಸ್ ರಸ್ತೆ ಸಂಪರ್ಕಿಸಿಯೇ ಹೋಗಬೇಕಾಗಿದೆ. ಆ ಸಂದರ್ಭದಲ್ಲಿ ಎದುರಿಗೆ ಏಕಮುಖವಾಗಿ ವಾಹನಗಳು ಬರುತ್ತಿದ್ದು, ಇದು ಜನ ದಟ್ಟಣೆ ಹಾಗೂ ಅಪಘಾತಕ್ಕೆ ಕಾರಣವಾಗುವ ಸಂಭವವಿದೆ. ಆದ್ದರಿಂದ ಸುಗಮ ವಾಹನ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಬೇಕು.

ಟಿ.ಭೂಬಾಲನ್‌, ಜಿಲ್ಲಾಧಿಕಾರಿ