ಕಳೆದ ವರ್ಷ 80 ಟಿಎಂಸಿ ನೀರಿದ್ದರೆ, ಈ ವರ್ಷ ಕೇವಲ 26 ಟಿಎಂಸಿ ಲಭ್ಯ

ಕೊಪ್ಪಳ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಕಚೇರಿಗಳಿಗೆ ಸೀಮಿತವಾಗದೆ ಕ್ಷೇತ್ರ ಭೇಟಿ ನೀಡಿ, ರೈತರಲ್ಲಿ ಪರ್ಯಾಯ ಬೆಳೆ ಬೆಳೆಯುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಸೂಚಿಸಿದರು.

ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ಜರುಗಿದ ಪರ್ಯಾಯ ಬೆಳೆ ಯೋಜನೆ ಮತ್ತು ರಸಗೊಬ್ಬರ ಕೊರತೆ ನಿವಾರಣೆಗೆ ಪರ್ಯಾಯ ಗೊಬ್ಬರಗಳು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರ್ಷ 2,48,000 ಹೆಕ್ಟೇರ್ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಅಭಾವದಿಂದ ಪ್ರಸ್ತುತ ಶೇ.49 ರಷ್ಟು ಅಂದರೆ ಕೇವಲ 1,64,000 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರಾ ಜಲಾಶಯದಿಂದ ನೀರಾವರಿ ಸೌಲಭ್ಯ ಸೀಮಿತವಾಗಿದ್ದು, ಕಳೆದ ವರ್ಷ 80 ಟಿಎಂಸಿ ನೀರಿದ್ದರೆ, ಈ ವರ್ಷ ಕೇವಲ 26 ಟಿಎಂಸಿ ಲಭ್ಯವಿದೆ. ರೈತರು ಹೆಚ್ಚಿನ ನೀರು ಬೇಡುವ ಬೆಳೆಗಳ ಬದಲಾಗಿ ಪರ್ಯಾಯ ಬೆಳೆ ಬೆಳೆಯುವಂತೆ ತಜ್ಞರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಫಸಲ್ ಭೀಮಾ ಯೋಜನೆಯಡಿ, ಜು.15ರ ನಂತರ ವಿಮೆ ನೋಂದಣಿ ಚುರುಕುಗೊಳಿಸಲಾಗಿದ್ದು, ಪ್ರಸ್ತುತ 65,000 ರೈತರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರಿದ್ದು, ಬಿತ್ತನೆ ತಡೆಯಲ್ಪಟ್ಟ ಪ್ರದೇಶಗಳಲ್ಲೂ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕಿದೆ ಎಂದರು.

ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ಎ.ಬಿ.ಪಾಟೀಲ್ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅಭಾವ ಮತ್ತು ಹವಾಮಾನ ವೈಪರೀತ್ಯದಂತಹ ಸವಾಲು ಎದುರಿಸಲು ರೈತರು ಪರ್ಯಾಯ ಬೆಳೆ ಯೋಜನೆ ಹಾಗೂ ಪರ್ಯಾಯ ಗೊಬ್ಬರಗಳ ಬಳಕೆಗೆ ಮುಂದಾಗಬೇಕು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ರೈತರಿಗೆ ಜ್ಞಾನ ಮತ್ತು ಜಾಗೃತಿ ಮೂಡಿಸುವ ಕೆಲಸ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಬರಗಾಲದ ಭೀತಿ ಆವರಿಸುತ್ತಿರುವ ಈ ಕಠಿಣ ಸಮಯದಲ್ಲಿ ರೈತರ ಹಿತರಕ್ಷಣೆಗಾಗಿ ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ವಿವಿಧ ಸಂಶೋಧನಾ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ. ಪ್ರಸ್ತುತ ಬಿತ್ತನೆ ಮಾಡಲಾದ ಬೆಳೆ ಒಣಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಳೆಯಾದರೂ ಅವುಗಳಿಂದ ನಿರೀಕ್ಷಿತ ಫಸಲು ಸಿಗುವುದು ಕಷ್ಟಕರವಾಗಿದೆ. ಆದ್ದರಿಂದ ರೈತರಿಗೆ ಪರ್ಯಾಯ ಬೆಳೆ ಪರಿಚಯಿಸಿ, ಅವುಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಹೆಸರು, ಭತ್ತ(ನೀರಾವರಿ), ಮೆಕ್ಕೆಜೋಳ ಮತ್ತು ಸಜ್ಜೆ ಈ ನಾಲ್ಕು ಬೆಳೆ ಒಳಪಡುತ್ತವೆ. ಪಂಚಾಯತಿ ವ್ಯಾಪ್ತಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಭಾಗದಲ್ಲಿ ಬಿತ್ತನೆಯಾಗದಿದ್ದರೆ ಅಥವಾ ಬಿತ್ತನೆ ಮಾಡಿದ ನಂತರ ಮೊಳಕೆಯ ಹಂತದಲ್ಲೇ ಬೆಳೆ ನಶಿಸಿ ಹೋಗಿದ್ದರೆ, ಅಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ನಷ್ಟದ ಒಟ್ಟು ವಿಮಾ ಮೊತ್ತದ ಶೇ.25 ರಷ್ಟು ಭಾಗ ಮುಂಚಿತವಾಗಿಯೇ ಪರಿಹಾರವಾಗಿ ನೀಡಿ, ಆ ವಿಮಾ ಪಾಲಿಸಿ ಕ್ಲೋಸ್ ಮಾಡಲಾಗುತ್ತದೆ. ಬೆಳೆ ಬೆಳೆದ ನಂತರ ಶೇ.50 ಕ್ಕಿಂತ ಹೆಚ್ಚು ಇಳುವರಿ ನಷ್ಟ ಸಂಭವಿಸಿದರೆ, ಕೃಷಿ ಇಲಾಖೆ ಮತ್ತು ಇನ್ಸುರೆನ್ಸ್ ಕಂಪನಿಯ ಅಧಿಕಾರಿಗಳು ಜಂಟಿಯಾಗಿ ಕ್ಷೇತ್ರ ಪರಿಶೀಲನೆ ನಡೆಸಲಿದ್ದಾರೆ ಎಂದರು.

ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಸವಣ್ಣೆಪ್ಪ, ತೋಟಗಾರಿಕಾ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮುಖ್ಯಸ್ಥ ಡಾ. ಬದ್ರಿಪ್ರಸಾದ ಪಿ ಆರ್., ಆಯೋಧ್ಯ ಕ್ರಾಪ ಅಕಾಡೆಮಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ್, ಮಾನ್ವಿಯ ಪಕ್ಷಿ ಪ್ರೇಮಿ ಸಲಾಹುದ್ದೀನ ಮಾನ್ವಿ, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಪಿ.ಎಂ. ಮಲ್ಲಯ್ಯ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಮತ್ತು ರೇಷ್ಮೆ ಇಲಾಖೆ ಉಪ ನಿರ್ದೇಶಕ ಸತೀಶ್ ತಾಂತ್ರಿಕ ಉಪನ್ಯಾಸ ನೀಡಿದರು.

ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಿವಣ್ಣ ಮೂಲಿಮನಿ, ಮುನಿರಾಬಾದ್ ತೋಟಗಾರಿಕೆ ಮಾಹಾವಿದ್ಯಾಲಯದ ನಿರ್ದೇಶಕ ಡಾ.ಪ್ರಭುಲಿಂಗ ಜಿ., ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ಕಮತರ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ವೆಂಕಪ್ಪ, ಗಂಗಾವತಿ ಕೆವಿಕೆ ಮುಖ್ಯಸ್ಥ ರಾಘವೇಂದ್ರ ಎಲಿಗಾರ ಸೇರಿದಂತೆ ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಇಲಾಖೆಯ ತಾಲೂಕು ಅಧಿಕಾರಿ, ರೈತ ಮುಖಂಡರು, ಕೃಷಿ ಮತ್ತು ಪಶು ಸಖಿಯರಿದ್ದರು.