ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಆಧುನಿಕ ತಂತ್ರಜ್ಞಾಗಳಿಂದಾಗಿ ಕ್ಯಾನ್ಸರ್ ಸಹಿತ ಹಲವು ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದು. ಹಾಗಾಗಿ ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಮಂಗಳೂರು ಘಟಕದ ಅಧ್ಯಕ್ಷ ಡಾ. ರಂಜನ್ ಆರ್.ಕೆ. ಹೇಳಿದ್ದಾರೆ.ನಗರದ ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಭಾನುವಾರ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಕ್ಯಾನ್ಸರ್ ಕುರಿತು ಜನರಲ್ಲಿ ಮಾಹಿತಿ ಕೊರತೆ ಇದೆ. ಮುಖ್ಯವಾಗಿ ರೋಗಗಳ ಬಗ್ಗೆ, ಅವುಗಳ ಲಕ್ಷಣದ ಬಗ್ಗೆ ಅರಿವು ಇರಬೇಕು ಎಂದವರು ತಿಳಿಸಿದರು.ಎ.ಜೆ. ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಪ್ರಾಧ್ಯಾಪಕಿ ಡಾ. ಅಮೃತ ಭಂಡಾರಿ ಮಾತನಾಡಿ, ಕ್ಯಾನ್ಸರ್ ಬಗ್ಗೆ ಅತಿಯಾದ ಭಯಪಡುವ ಅಗತ್ಯವಿಲ್ಲ. ರೋಗ ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ಮುಖ್ಯವಾಗಿ ಗ್ರಾಮೀಣ ಜನರಿಗೆ ಕ್ಯಾನ್ಸರ್ ಸಹಿತ ವಿವಿಧ ರೋಗಗಳ ಬಗ್ಗೆ ಅರಿವು ಇರುವುದಿಲ್ಲ. ಅವರಿಗೆ ಆ ಕುರಿತು ಶಿಕ್ಷಣ ನೀಡುವ ಕೆಲಸ ಆಗಬೇಕು. ನಿಯಮಿತ ವ್ಯಾಯಾಮ, ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಸೇರಿದಂತೆ ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಢಿಸಿಸಕೊಳ್ಳಬೇಕು ಎಂದು ವಿವರಿಸಿದರು.ವೆನ್ಲಾಕ್ ಆಸ್ಪತ್ರೆಯ ಕ್ಯಾನ್ಸರ್ ಉಪಶಮನ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಕೋಶಾಧಿಕಾರಿ ಮೋಹನ್ ಶೆಟ್ಟಿ ಇದ್ದರು. ಮಂಗಳೂರು ವಿ.ವಿ. ಯುವ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಸ್ವಾಗತಿಸಿದರು. ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಘಟಕದ ಕಾರ್ಯದರ್ಶಿ ಸಂಜಯ್ ಶೆಟ್ಟಿ ವಂದಿಸಿದರು.ಯುವ ರೆಡ್‌ಕ್ರಾಸ್, ಮಂಗಳೂರು ವಿ.ವಿ., ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ. ಘಟಕ, ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಮಂಗಳೂರು ಘಟಕ, ದ.ಕ. ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.