ಸಾರಾಂಶ
ಕಾರವಾರ: ಪ್ರಥಮ ಚಿಕಿತ್ಸಾ ವಿಧಾನಗಳ ಕುರಿತಂತೆ ಚಿಕ್ಕ ವೀಡಿಯೋಗಳನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ಕಾರಣಗಳಿಂದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆಯುವುದು ವಿಳಂಬವಾದಲ್ಲಿ ರೋಗಿಯ ಪರಿಸ್ಥಿತಿ ಗಂಭೀರವಾಗುತ್ತದೆ. ತಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡುವುದರಿಂದ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಿದೆ. ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ವಿಶಾಲವಾಗಿದ್ದು, ಹಲವು ಕುಗ್ರಾಮಗಳನ್ನು ಹೊಂದಿದೆ. ಕೆಲವು ಕಡೆಗಳಲ್ಲಿ ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಸಹ ಇಲ್ಲವಾಗಿದೆ. ಇಂತಹ ಸ್ಥಳದಲ್ಲಿರುವ ವ್ಯಕ್ತಿಯ ಆರೋಗ್ಯದಲ್ಲಿ ತಕ್ಷಣದಲ್ಲಿ ಏರುಪೇರಾದಾಗ, ಅಪಘಾತಗಳಾದಾಗ, ಅಗ್ನಿ ಅವಘಡಗಳಾದಾಗ, ವಿಷ ಜಂತುಗಳು ಕಚ್ಚಿದಾಗ ತುರ್ತು ವೈದ್ಯಕೀಯ ನೆರವು ದೊರೆಯುವುದು ಸಾಧ್ಯವಾಗದೇ ಇದ್ದಾಗ ಸಂಭವಿಸಬಹುದಾದ ಪ್ರಾಣಾಪಾಯದಂತಹ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಪ್ರಥಮ ಚಿಕಿತ್ಸಾ ವಿಧಾನಗಳು ನೆರವಾಗಲಿವೆ. ಆದ್ದರಿಂದ ಇಂತಹ ಪ್ರಥಮ ಚಿಕಿತ್ಸಾ ವಿಧಾನಗಳ ಕುರಿತಂತೆ ಆರೋಗ್ಯ ಇಲಾಖೆಯ ಮೂಲಕ ವೀಡಿಯೋಗಳನ್ನು ಸಿದ್ಧಪಡಿಸಿ, ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಪಡಿಸಿದರೆ ಅನೇಕ ರೋಗಿಗಳನ್ನು ಪ್ರಾಣಾಪಾಯಗಳಿಂದ ಪಾರು ಮಾಡಬಹುದು ಎಂದರು.ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ ಹಾವು ಕಡಿತದ 5 ಪ್ರಕರಣ ವರದಿಯಾಗಿದ್ದು, ಅದರಲ್ಲಿ 3 ಪ್ರಕರಣಗಳಲ್ಲಿ ಆಸ್ಪತ್ರೆಗೆ ಸಾಗುವ ಮಾರ್ಗಮಧ್ಯದಲ್ಲಿಯೇ ಮರಣ ಸಂಭವಿಸಿದೆ. ಈ ವ್ಯಕ್ತಿಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ದೊರೆತಿದ್ದಲ್ಲಿ ಅವರ ಪ್ರಾಣ ಉಳಿಯುತ್ತಿತ್ತು. ಅಲ್ಲದೇ ಅಪಘಾತಗಳು ಸಂಭವಿಸಿದಾಗ, ಹೃದಯಾಘಾತಗಳಾದಾಗ ನೀಡುವ ಪ್ರಥಮ ಚಿಕಿತ್ಸೆ ರೋಗಿಯ ಜೀವವನ್ನು ಉಳಿಸುತ್ತವೆ. ಆದ್ದರಿಂದ ಪ್ರಥಮ ಚಿಕಿತ್ಸಾ ವಿಧಾನಗಳನ್ನು, ಸರಳವಾಗಿ, ಎಲ್ಲರಿಗೂ ಅರ್ಥವಾಗವಂತೆ ವೀಡಿಯೋ ಸಿದ್ಧಪಡಿಸಬೇಕು. ಪ್ರಥಮ ಚಿಕಿತ್ಸಾ ವಿಧಾನಗಳ ಬಗ್ಗೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವ ಮೂಲಕ ಎಲ್ಲ ಮನೆಗಳಿಗೆ ಮಾಹಿತಿ ತಲುಪುವಂತೆ ಹಾಗೂ ತುರ್ತು ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಇದರ ಅರಿವು ಇರುವಂತೆ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಬಿ.ವಿ., ಆರೋಗ್ಯ ಇಲಾಖೆಯ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.