ಫ್ರೂಟ್ಸ್‌ ತಂತ್ರಾಂಶ ಕುರಿತು ಜಾಗೃತಿ ಮೂಡಿಸಿ: ಶಾಸಕ ಬಸನಗೌಡ ದದ್ದಲ್‌

| Published : Jan 09 2024, 02:00 AM IST

ಸಾರಾಂಶ

ನಗರದ ಜಿಪಂ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಲು ಒತ್ತು ಕೊಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ರೈತರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಮತ್ತು ಪರಿಹಾರ ಒದಗಿಸಲು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಸಾಗುವಳಿ ಭೂಮಿಗಳ ವಿವರಗಳನ್ನು ನೋಂದಣಿ ಮಾಡಿಕೊಳ್ಳುವಂತೆ ರೈತರಿಗೆ ಮಾಹಿತಿ ನೀಡಬೇಕು. ರೈತರು ಹೆಚ್ಚಾಗಿ ನದಿ ತೀರದಲ್ಲಿ ಪಂಪ್‌ಸೆಟ್‌ಗಳನ್ನು ಬಳಸಿಕೊಂಡು ವ್ಯವಸಾಯ ಮಾಡುತ್ತಾರೆ. ಅಂತಹ ರೈತರ ಜಮೀನುಗಳನ್ನು ನೀರಾವರಿ ಜಮೀನುಗಳೆಂದು ಪರಿಗಣಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಕೈಗೊಳ್ಳಲಾದ ವಿವಿಧ ಇಲಾಖೆಯ ಬಾಕಿ ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗನೆ ಉತ್ತಮ ಗುಣಮಟ್ಟದಲ್ಲಿ ಮುಗಿಸಬೇಕು. ಮತ್ತು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ಮುಗಿದ ನಂತರ ರಸ್ತೆಗಳನ್ನು ಮೊದಲಿನಂತೆ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೆಡಿಪಿ ಸಭೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಗೈರಾದ ಅಧಿಕಾರಿಗಳ ವಿರುದ್ಧ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಾಪಂ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಮರಳು ಸಾಗಿಸುವ ವಾಹನಗಳು ಹಳ್ಳಿಗಳ ಒಳಗಿಂದ ಹೋಗುವುದರಿಂದ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹದಗೆಡುತ್ತಿದ್ದು, ಅಂತಹ ವಾಹನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ತಾಲೂಕು ಮಟ್ಟದ ಕೆಡಿಪಿ ಸಮಿತಿಯ ನೂತನ ನಾಮನಿರ್ದೇಶಿತ ಸದಸ್ಯರಿಗೆ ಗುರುತಿನ ಚೀಟಿ ಮತ್ತು ಪುಷ್ಪಗುಚ್ಚವನ್ನು ನೀಡಿ ಸ್ವಾಗತಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಆರ್‌ಎಪಿಎಂಸಿ ಅಧ್ಯಕ್ಷ ಜಯಂತರಾವ್ ಪತಂಗೆ, ಎಪಿಎಂಸಿ ಉಪಾಧ್ಯಕ್ಷ ಬೀರ್ ಅಹ್ಮದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಸ್ವಾಮಿ ಅಲ್ಕೂರು, ಕೆಡಿಪಿ ಸಮಿತಿ ಸಭೆಯ ಸದಸ್ಯರಾದ ಪಲ್ಲವಿ ಯದ್ಲಾಪೂರ, ಸುರೇಶ ಯಾಪಲದಿನ್ನಿ, ತಿಮ್ಮಪ್ಪ ನಾಯಕ ಆತ್ಕೂರು, ಫಾರೂಕ್ ಹುಸೇನ್ ಯರಗೇರಾ, ಜಿಂದಪ್ಪ ಹೊಸಪೇಟೆ, ಶರಣಬಸವ ಜಿ.ತಿಮ್ಮಾಪೂರ, ಸಹಾಯಕ ಆಯುಕ್ತೆ ಮಹಿಬೂಬಿ, ತಹಸೀಲ್ದಾರ ಸುರೇಶ ವರ್ಮಾ, ತಾಲೂಕು ಪಂಚಾಯತ್ ಇಒ ಚಂದ್ರಶೇಖರ ಪವಾರ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.