ನರೇಗಾ ಕೆಲಸದ ಬಗ್ಗೆ ಜನಜಾಗೃತಿ ಮೂಡಿಸಿ: ಗರಿಮಾ ಪನ್ವಾರ್‌

| Published : May 21 2024, 12:47 AM IST

ಸಾರಾಂಶ

ನಮೂನೆ-6ರಲ್ಲಿ ಕೆಲಸಕ್ಕಾಗಿ ಬೇಡಿಕೆ ಪಡೆದುಕೊಂಡ ಬಡ ಕುಟುಂಬಗಳಿಗೆ ಕೆಲಸ ನೀಡಿ ಆರ್ಥಿಕ ಸಹಾಯ ಮಾಡಬೇಕು ಎಂದು ಮನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಪಿಡಿಒಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಹಿಂದಿನ ವರ್ಷದ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುವಂತೆ ಪ್ರೇರೇಪಿಸಲು ಜನ ಜಾಗೃತಿ ಮೂಡಿಸಬೇಕು ಹಾಗೂ ನಮೂನೆ-6ರಲ್ಲಿ ಕೆಲಸಕ್ಕಾಗಿ ಬೇಡಿಕೆ ಪಡೆದುಕೊಂಡ ಬಡ ಕುಟುಂಬಗಳಿಗೆ ಕೆಲಸ ನೀಡಿ ಆರ್ಥಿಕ ಸಹಾಯ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ ತಿಳಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಲು ಸೂಚಿಸಿದರು.

ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಯೋನೆಯಡಿಯಲ್ಲಿ ಏ.1ರಿಂದ ಇಲ್ಲಿಯವರೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಿಕೊಡಲು ಗುರಿ ನೀಡಿದ್ದು, ಗುರಿಗೆ ಅನುಗುಣವಾಗಿ ಪಿಡಿಒಗಳು ಕೆಲಸ ನೀಡಿದ ಕುರಿತು ಅವರು ಪರಿಶೀಲಿಸಿದರು.

ಗುರಿ ಸಾಧನೆ ಮಾಡದೆ ಇರುವ ಪಿಡಿಒಗಳಿಗೆ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಬೇಸಿಗೆಯ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಕೆಲಸ ಇರುವುದಿಲ್ಲ. ಈ ಸಮಯದಲ್ಲಿ ಬಡ ಕುಟುಂಬಗಳಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಒದಗಿಸಿ ಕಾಮಗಾರಿ ಯೋಜನೆ ನಿಯಮಾನುಸಾರವಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಶಿಶುಪಾಲನಾ ಕೇಂದ್ರ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭಿಸಿ, ಕೂಲಿ ಕೂಲಿಕಾರ್ಮಿಕರ ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಿದರು. ಅಕಾಲಿಕ ಮಳೆಯಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿನ ಸ್ವಚ್ಛತೆ ಕಾಪಾಡುವುದರೊಂದಿಗೆ ಪೈಪ್ ಲೀಕೇಜ್ ಆಗದಂತೆ ನೋಡಿಕೊಳ್ಳಬೇಕು. ನೀರಿನ ಟ್ಯಾಂಕ್, ಚರಂಡಿ ಸ್ವಚ್ಛಗೊಳಿಸುವುದು, ನೈರ್ಮಲ್ಯ ಕಾಪಾಡುವ ಕೆಲಸ ಕಟ್ಟುನಿಟ್ಟಾಗಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಲವಂತ ರಾಠೋಡ್, ಯಾದಗಿರಿ ಮತ್ತು ಗುರುಮಠಕಲ್ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ್ ರಾಜ್, ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರ, ರಾಮಚಂದ್ರ ಮಸೂದೆ, ವಿಜಯಲಕ್ಷ್ಮಿ ಶಹಬಾದಿ, ಸಹಾಯಕ ಲೆಕ್ಕಾಧಿಕಾರಿ ಕಾಶಿನಾಥ, ತಾಲೂಕು ಯೋಜನಾ ಅಧಿಕಾರಿ ಶಶಿಧರ ಹಿರೇಮಠ, ವ್ಯವಸ್ಥಾಪಕ ಶಿವರಾಯ ಸೇರಿ ಇತರರಿದ್ದರು.