ಸಾರಾಂಶ
ಹಾವೇರಿ: ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಜನಸಂಖ್ಯೆ ಹೆಚ್ಚಳದಿಂದ ಆಗುವ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ವಿಶ್ವ ಜನಸಂಖ್ಯೆ ದಿನವನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ತಿಳಿಸಿದರು.ತಾಲೂಕಿನ ಹೊಸರಿತ್ತಿಯ ಜಿವಿಎಚ್ ಕಾಲೇಜಿನಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಗಳಾದ ಮಹಿಳೆಯರಿಗೆ ಟ್ಯೂಬೆಕ್ಟಮಿ, ಉದರದರ್ಶಕ ಶಸ್ತ್ರಚಿಕಿತ್ಸೆ(ಲ್ಯಾಪರೋಸ್ಕೋಪಿ), ಪುರುಷರಿಗೆ ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ 2. ತಾತ್ಕಾಲಿಕ ವಿಧಾನಗಳಾದ ಪುರುಷರಿಗೆ ನಿರೋಧ, ಮಹಿಳೆಯರಿಗೆ ವಂಕಿಧಾರಣೆ, ಪಿಪಿಐಯುಸಿಡಿ, ಪಿಎಐಯುಸಿಡಿ, ಇಂಟರ್‌ವಲ್ ಐಯುಸಿಡಿ ಹಾಗೂ ಗರ್ಭನಿರೋಧಕ ಮಾಲಾ-ಎನ್, ಗುಳಿಗೆಗಳು, ಛಾಯಾ, ಇಸಿಪಿ ತುರ್ತು ಗರ್ಭನಿರೋಧಕ ಮಾತ್ರೆಗಳು ಹಾಗೂ ಗರ್ಭನಿರೋಧಕ ಚುಚ್ಚುಮದ್ದು(ಅಂತರ)ಗಳನ್ನು ನೀಡಲಾಗುತ್ತಿದೆ ಎಂದರು. ಉಪನ್ಯಾಸಕ ಶೇಖರ ಭಜಂತ್ರಿ ಅವರು, ಜನಸಂಖ್ಯಾ ಹೆಚ್ಚಳದಿಂದ ದೇಶಕ್ಕೆ ಆಗುವ ತೊಂದರೆ ಹಾಗೂ ಅಂಕಿ- ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಜಂಗಳಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಎಫ್.ಐ. ಶಿಗ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ವಾಣಿಶ್ರಿ ಏಕಬೋಟೆ, ಕೃಷ್ಣಪ್ಪ ಕನ್ನಮ್ಮನವರ ಇತರರು ಇದ್ದರು.ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಪುಟ್ಟಣಗೌಡರ ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಎಂ.ಎಚ್. ಪಾಟೀಲ ವಂದಿಸಿದರು. ಹೊಸರಿತ್ತಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಜಾಥಾದ ಮೂಲಕ ಕುಟುಂಬ ಕಲ್ಯಾಣ ಕಾರ್ಯಕ್ರಮದ ಕುರಿತು ಹಾಗೂ ಭಿತ್ತಿಪತ್ರ, ಬ್ಯಾನರ್ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಯಿತು.