ಸಾರಾಂಶ
ಹುಬ್ಬಳ್ಳಿ:
ಆಯುರ್ವೇದಿಕ ಗಿಡಮೂಲಿಕೆಗಳ ಸಸ್ಯತಾಣವಾಗಿರುವ ಕಪ್ಪತಗುಡ್ಡವು ಕೇವಲ ಈ ರಾಜ್ಯದ ಸ್ವತ್ತಲ್ಲ, ಇಡೀ ದೇಶದ ಸ್ವತ್ತು. ಈ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಹೇಳಿದರು.ಇಲ್ಲಿನ ಬಿವಿಬಿ ಕಾಲೇಜು ಆವರಣದ ಬಯೋಟೆಕ್ನಾಲಜಿ ಸಭಾಗೃಹದಲ್ಲಿ ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠ ಹಾಗೂ ಆಯುಷ್ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ, ಕೆಎಲ್ಇ ಫಾರ್ಮಸಿ ಕಾಲೇಜಿನ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ, ಸಂರಕ್ಷಣೆ, ಕೃಷಿ ಮತ್ತು ಆರೋಗ್ಯ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
80 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕಪ್ಪತಗುಡ್ಡ ನೂರಾರು ಔಷಧೀಯ ಸಸ್ಯ ಸಂಪತ್ತನ್ನು ತನ್ನ ಸೆರಗಿನಲ್ಲಿ ಕಾಪಾಡಿಕೊಂಡಿದೆ. ಇಂತಹ ಔಷಧೀಯ ಸಸ್ಯಕಾಶಿಯನ್ನು ಮುಂದಿನ ಸಮಾಜಕ್ಕೆ ಉಳಿಸಿಕೊಡಬೇಕಾಗಿದೆ. ಈಗಾಗಲೇ ಇಲ್ಲಿ 340ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ. ಈ ಕಾರ್ಯಾಗಾರದಲ್ಲಿ ನೂರಾರು ರೈತರು, 40ಕ್ಕೂ ಅಧಿಕ ವಿವಿಧ ಔಷಧ ಕಂಪನಿ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ. ರೈತರ, ಸಂಶೋಧಕರ ಹಾಗೂ ವ್ಯಾಪಾರಸ್ಥರ ನಡುವೆ ಸಂಪರ್ಕ ಕಲ್ಪಿಸುವುದರೊಂದಿಗೆ ಪೂರಕ ವಾತಾವರಣ ನಿರ್ಮಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.ಇಂದಿಗೂ ಆತಂಕವಿದೆ:
ಪ್ರತಿ ಬಾರಿಯೂ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ನಮಗೆ ಭಯ ಆರಂಭವಾಗುತ್ತದೆ. ಯಾವ ಸರ್ಕಾರ ಕಪ್ಪತಗುಡ್ಡದ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬ ಆತಂಕ ಕಾಡುತ್ತದೆ. ಆದರೆ, ಗದಗ ಜಿಲ್ಲೆಯ ಜನತೆ ಎಂದಿಗೂ ಕಪ್ಪತಗುಡ್ಡವನ್ನು ಬಿಟ್ಟುಕೊಟ್ಟಿಲ್ಲ. ಈಗ ಇದು ವನ್ಯಜೀವಿ ತಾಣವಾಗಿರುವುದು ನಮಗೆ ಹಾಗೂ ಪರಿಸರ ಪ್ರೇಮಿಗಳಿಗೆ ಸಂತಸವನ್ನುಂಟು ಮಾಡಿದೆ ಎಂದರು.ಆಯುಷ್ ಇಲಾಖೆ ಆಯುಕ್ತ ಡಾ. ಶ್ರೀನಿವಾಸಲು ಮಾತನಾಡಿ, ಆಯುಷ್ಯ ವೈದ್ಯ ಪದ್ಧತಿ ಕುರಿತು ಮಾತು ಬಂದಾಗ ನೆನಪಿಗೆ ಬರುವುದೇ ಈ ನಮ್ಮ ಕಪ್ಪತಗುಡ್ಡ. ಇಲ್ಲಿ 400ಕ್ಕೂ ಅಧಿಕ ಔಷಧ ಸಸ್ಯಗಳನ್ನು ಹೊಂದಿದೆ. ರಾಜ್ಯದಲ್ಲಿ ನೆಲಬೇವು, ಅಶ್ವಗಂಧ, ತುಳಸಿ, ಬ್ರಾಹ್ಮಿಗೆ ಹೆಚ್ಚು ಬೇಡಿಕೆಯಿದೆ. ದೇಶದಲ್ಲಿಂದು ಆಯುಷ್ ಔಷಧವು ಉದ್ಯೋಗವಾಗಿ ಮಾರ್ಪಡುತ್ತಿದೆ. ಇದಕ್ಕೆ ರೈತರೇ ಮುಖ್ಯ ತಳಹದಿಯಾಗಿದ್ದಾರೆ ಎಂದರು.
ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೆಂಕಟೇಶನ್ ಮಾತನಾಡಿ, ಇಂದು ಆಯುರ್ವೇದಿಕ್ ಔಷಧಿ ತಯಾರಿಸಲು ಕಚ್ಚಾ ವಸ್ತುಗಳು ಸಿಗುತ್ತಿಲ್ಲ. ರೈತರು ಈ ನಿಟ್ಟಿನಲ್ಲಿ ಬೇರೆ ಬೇರೆ ಔಷಧ ಸಸ್ಯ ಬೆಳೆಯಲು ಆಸಕ್ತಿ ಹೊಂದಬೇಕು ಎಂದು ಕರೆ ನೀಡಿದರು.ಪ್ರಾಧ್ಯಾಪಕ ಡಾ. ಜಗನ್ನಾಥರಾವ್, ಹುಬ್ಬಳ್ಳಿಯ ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಹಾಗೂ ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ ಸೇರಿದಂತೆ ಹಲವರು ಮಾತನಾಡಿದರು. ಡಾ. ಸಿ.ಎಸ್. ಅರಸನಾಳ ಅವರು ಕಪ್ಪತಗುಡ್ಡದ ಜೀವವೈವಿಧ್ಯತೆ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ಸಸ್ಯ ಸಂಜೀವಿನಿ ಪಂಚಕರ್ಮ ಚಿಕಿತ್ಸಾ ಕೇಂದ್ರದ ವೈದ್ಯಶ್ರೀ ವೇದಶ್ರವ ಶರ್ಮಾ ಅವರನ್ನು ಸನ್ಮಾನಿಸಲಾಯಿತು.
ಡಾ. ಎಸ್.ವಿ. ನಾಡಗೌಡರ, ಬಾಲಚಂದ್ರ ಜಾಬಶೆಟ್ಟಿ, ಡಾ. ಸಿ.ಸಿ. ಹಿರೇಮಠ, ಡಾ. ಎಂ.ಆರ್. ಪಾಟೀಲ, ಪ್ರೊ. ರವೀಂದ್ರ ಕರಡಿ, ಡಾ. ಬಿ.ಎಸ್. ಮಾಳವಾಡ, ಡಾ. ಎಂ.ವಿ. ಚಿತವಾಡಗಿ ಸೇರಿದಂತೆ ಹಲವರಿದ್ದರು.