ಪದವೀಧರ ಮತದಾರರಲ್ಲಿ ಜಾಗೃತಿ ಮೂಡಿಸಿ: ರಾಘವೇಂದ್ರ ರಾವ್

| Published : Oct 17 2025, 01:02 AM IST

ಸಾರಾಂಶ

ಕರ್ನಾಟಕ ಪಶ್ಚಿಮ ಪದವೀಧರರ ದೈವಾರ್ಷಿಕ ಚುನಾವಣೆ ೨೦೨೬ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಕೆಯ ಕುರಿತು ಶಿರಹಟ್ಟಿ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಸಭೆ ನಡೆಯಿತು.

ಶಿರಹಟ್ಟಿ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ೨೦೨೬ಕ್ಕೆ ಸಂಬಂಧಿಸಿದಂತೆ ಕ್ರಮಬದ್ಧವಾಗಿ ಮತ್ತು ನ್ಯಾಯಬದ್ಧವಾಗಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ತಹಸೀಲ್ದಾರ್‌ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕೆ. ರಾಘವೇಂದ್ರ ರಾವ್ ಹೇಳಿದರು.

ಕರ್ನಾಟಕ ಪಶ್ಚಿಮ ಪದವೀಧರರ ದೈವಾರ್ಷಿಕ ಚುನಾವಣೆ ೨೦೨೬ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಕೆಯ ಕುರಿತು ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿ ತಯಾರಿಕೆ ಕುರಿತು ಸೂಚನೆಗಳ ಪ್ರತಿಯನ್ನು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದೆ. ಈ ಕುರಿತು ಅರ್ಹ ಪದವೀಧರ ಮತದಾರರಲ್ಲಿ ಜಾಗೃತಿ ಮೂಡಿಸಿ, ನಿಯಮಾನುಸಾರ ಈ ಮತದಾರ ಪಟ್ಟಿಗೆ ಸೇರ್ಪಡೆ ಆಗುವಂತೆ ಮಾಹಿತಿ ನೀಡಬೇಕು. ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ನಮೂನೆ ೧೮ರ ಅರ್ಜಿಯನ್ನು ಸಲ್ಲಿಸಲು ನ. ೬ ಕೊನೆಯ ದಿನವಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬ ಪದವೀಧರ ವ್ಯಕ್ತಿ ಮತದಾರರ ನೋಂದಣಿ ನಿಯಮಗಳ ಅನ್ವಯ ನಮೂನೆ-೧೮ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪದವೀಧರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ೧ನೇ ನವೆಂಬರ್ ೨೦೨೫ಕ್ಕೂ ಮುಂಚೆ ಕನಿಷ್ಠ ಮೂರು ವರ್ಷ ಮೊದಲು ಪದವಿ ಪೂರ್ಣಗೊಳಿಸಿರಬೇಕು. ಅಂತಿಮ ಪದವಿ ಸೇರಿ ಮೂರು ವರ್ಷದ ದೃಢೀಕೃತಗೊಳಿಸಿದ ಪ್ರತಿಯೊಂದಿಗೆ ಆಧಾರ್‌ ಕಾರ್ಡ್‌, ವೋಟರ್ ಕಾರ್ಡ್‌ ಲಗತ್ತಿಸಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ನಿಯೋಜಿತ ಅಧಿಕಾರಿಗಳ ಬಳಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಮತದಾರರ ಪಟ್ಟಿ ತಯಾರಿಕೆ ನಂತರ ನ. ೨೫ರಂದು ಈ ಮತಕ್ಷೇತ್ರದ ಮತದಾರರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿ. ೩೦ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿದರು.

ಕಳೆದ ಬಾರಿಯ ಚುನಾವಣೆಯಲ್ಲಿ ತಾಲೂಕಿನಲ್ಲಿ ತಹಸೀಲ್ದಾರ್‌ ಕಾರ್ಯಾಲಯ ಮತ್ತು ಬೆಳ್ಳಟ್ಟಿ ಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಈ ಬಾರಿ ಮತದಾರರ ಸಂಖ್ಯೆ ಹೆಚ್ಚಾದಲ್ಲಿ ಮತಗಟ್ಟೆ ತೆರೆಯಲು ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

ನಿಯೋಜಿತ ಅಧಿಕಾರಿ ತಾಪಂ ಇಒ ಆರ್.ವಿ. ದೊಡ್ಡಮನಿ, ಖಜಾನೆ ಇಲಾಖೆ ಅಧಿಕಾರಿ ಶಿವಪ್ಪ ಹದ್ಲಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಎಂ.ಸಿ. ಭಜಂತ್ರಿ, ಕಾಶಪ್ಪ ಸ್ವಾಮಿ, ಎಚ್.ಟಿ. ಬಿಜ್ಜೂರ, ಡಾ. ಉಮೇಶ ಅರಹುಣಸಿ, ಎಸ್.ಎಸ್. ಸೋಮಣ್ಣವರ, ಕನಕಮ್ಮ, ಎಂ.ಎ. ಮಕಾನದಾರ, ಸಂತೋಷ ಅಸ್ಕಿ, ವಿನೋದ ಪಾಟೀಲ ಇದ್ದರು.