ಭ್ರಷ್ಟಾಚಾರ ವಿರುದ್ಧ ಜನರಿಗೆ ಅರಿವು ಮೂಡಿಸೋಣ: ಮಹಿಮಾ ಪಟೇಲ್

| Published : Dec 10 2024, 12:32 AM IST

ಸಾರಾಂಶ

ಜನರಲ್ಲಿ ಭ್ರಷ್ಟಾಚಾರದ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ.

ಹೊಸಪೇಟೆ: ಕೆಆರ್‌ಎಸ್‌ ಪಕ್ಷದ ಸಮಾಜ ಪರ ಕಳಕಳಿ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಇನ್ನೊಂದು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ಕೆ.ಆರ್.ಎಸ್. ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಈ ಬದ್ಧತೆ ಕಾರಣಕ್ಕಾಗಿ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್‌ ಹೇಳಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಭ್ರಷ್ಟಾಚಾರದ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಆ ಮೂಲಕ ಜನರ ಬದುಕುಗಳನ್ನು ಹಸನು ಮಾಡುವಂಥ ಕೆಲಸಗಳನ್ನು ಮಾಡಬೇಕಿದೆ. ಪರಿಸರದ ಮೇಲೆ ನಿರಂತರ ಅತ್ಯಾಚಾರ ಮಾಡಲಾಗುತ್ತಿದೆ. ದೊಡ್ಡ ಗುಡ್ಡಗಳನ್ನು ನುಂಗಿ ಹಾಕುತ್ತಿದ್ದಾರೆ. ಕೆರೆ ಕೆರೆಗಳನ್ನೇ ನುಂಗಿ ಹಾಕುತ್ತಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲ, ಚಿತ್ರದುರ್ಗದಲ್ಲೂ ಗುಡ್ಡ ಗುಡ್ಡಗಳನ್ನೇ ಅಗೆದು ಹಾಕುತ್ತಿದ್ದಾರೆ. ‘ಜೆಸಿಬಿ’ಯಂಥ ಪಕ್ಷಗಳಿಗೆ ಅಧಿಕಾರಗಳನ್ನು ನೀಡಿದಾಗ ಇಂಥ ಪರಿಸರದ ಮೇಲಿನ ಅತ್ಯಾಚಾರಗಳು ನಿರಂತರವಾಗುತ್ತವೆ. ಇದೆಲ್ಲವೂ ತಡೆಯುವ ನಿಟ್ಟಿನಲ್ಲಿ ಹರಿಹರದಿಂದ ಕಿಷ್ಕಿಂದೆವರೆಗೆ ಈ ತಿಂಗಳ 22ರಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಈ ಪಾದಯಾತ್ರೆಯಲ್ಲಿ ಎಲ್ಲ ಪಕ್ಷಗಳೂ ಕೈಜೋಡಿಸಿ ಪರಿಸರ ಉಳಿಸಬೇಕಿದೆ. ಜನರ ಪರವಾಗಿ ಕೆಲಸ ಮಾಡುವಂಥದ್ದೇ ನಿಜವಾದ ರಾಜಕಾರಣ ಎಂದರು.

ಕೊಪ್ಪಳ ಜಿಲ್ಲಾಧ್ಯಕ್ಷ ಆಶಾ ವೀರೇಶ ಮಾತನಾಡಿ, ಲಂಚ ಎನ್ನುವಂಥ ಸಾಮಾಜಿಕ ಪಿಡುಗು ಯಾವ ರೀತಿ ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸೌಧದವರೆಗೂ ಲಂಚ ವ್ಯಾಪಕವಾಗಿ ಹರಡಿದೆ. ಹಾಗಾಗಿ ಈ ರಾಜ್ಯವಾಗಲೀ, ದೇಶವಾಗಲೀ ಯಾಕೆ ಇನ್ನೂ ಅಭಿವೃದ್ಧಿ ಹೊಂದುತ್ತಿಲ್ಲವೆಂದರೆ, ಇದಕ್ಕೆ ನೇರ ಕಾರಣ ಲಂಚ. ಈ ಲಂಚ, ಭ್ರಷ್ಟಾಚಾರ ನಿಲ್ಲಬೇಕೆನ್ನುವುದೇ ನಮ್ಮ ಆಶಯವಾಗಿರುತ್ತದೆ. ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಣೆ ಮಾಡುತ್ತಿರುವ ಕರ್ನಾಟಕದ ಏಕೈಕ ಪಕ್ಷ ಕೆ.ಆರ್.ಎಸ್. ಪಕ್ಷವಾಗಿದೆ ಎಂದರು.

ಪಕ್ಷದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ಮಾತನಾಡಿದರು.

ವಿಜಯನಗರ ಜಿಲ್ಲಾಧ್ಯಕ್ಷರು ಸುಬಾನ್ ಹುಗಲೂರು ಅಧ್ಯಕ್ಷತೆ ವಹಿಸಿ ಮಾತನಾಡಿ, 2016ರಿಂದ ಕೆ.ಆರ್.ಎಸ್. ಪಕ್ಷದ ಅಂಗಸಂಸ್ಥೆಯಾದ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಭ್ರಷ್ಟಾಚಾರ ವಿರೋಧಿ ದಿನವನ್ನು ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ಇವತ್ತು ಯಾವ ಕಚೇರಿಗಳಿಗೆ ಹೋದರೂ, ಲಂಚ, ಭ್ರಷ್ಟಾಚಾರವಿಲ್ಲದೇ ಸಾರ್ವಜನಿಕ ಕೆಲಸಗಳಾಗುತ್ತಿಲ್ಲ. ಇದೆಲ್ಲವೂ ಸರಿಯಾಗಬೇಕೆಂದರೆ, ಈ ನಾಡಿನಲ್ಲಿ ಕೆ.ಆರ್.ಎಸ್. ಪಕ್ಷದ ಆಡಳಿತ ಜಾರಿಯಾಗಬೇಕು ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನವೀರ ಚಿತ್ತಾರ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಟಿ. ನಜೀರ್, ರೈತ ಘಟಕದ ಜಿಲ್ಲಾಧ್ಯಕ್ಷ ಆನಂದ್ ಚಲವಾದಿ, ವಿಜಯನಗರ ಜಿಲ್ಲಾ ಕಾರ್ಯದರ್ಶಿ ಹರಕುಣಿ ಗಣೇಶ, ಬಳ್ಳಾರಿ ಜಿಲ್ಲಾ ಎಸ್.ಸಿ.ಎಸ್.ಟಿ. ಘಟಕದ ಅಧ್ಯಕ್ಷ ಎಚ್.ವಿ. ಸಂತೋಷ್‌ ಇದ್ದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹೊಸಪೇಟೆ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್‌ ಮಾತನಾಡಿದರು.