ಡೆಂಘೀ ನಿಯಂತ್ರಣದ ಜಾಗೃತಿ ಮೂಡಿಸಿ: ಮಲ್ಲಪ್ಪ ತೊದಲಬಾಗಿ

| Published : Sep 12 2024, 01:45 AM IST

ಡೆಂಘೀ ನಿಯಂತ್ರಣದ ಜಾಗೃತಿ ಮೂಡಿಸಿ: ಮಲ್ಲಪ್ಪ ತೊದಲಬಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಡೆಂಘೀ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸುವ ಕೆಲಸವನ್ನು ಸಂಬಂಧಿಸಿದ ಎಲ್ಲ ಅಧಿಕಾರಿಗಳು ತುರ್ತಾಗಿ ಮಾಡಬೇಕು.

ಯಲಬುರ್ಗಾ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ । ಸ್ವಚ್ಛತೆಗೆ ಎಲ್ಲರೂ ಹೆಚ್ಚು ಗಮನಹರಿಸಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಇತ್ತೀಚೆಗೆ ಡೆಂಘೀ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸುವ ಕೆಲಸವನ್ನು ಸಂಬಂಧಿಸಿದ ಎಲ್ಲ ಅಧಿಕಾರಿಗಳು ತುರ್ತಾಗಿ ಮಾಡಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡ್ಡಾಯವಾಗಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು. ಚರಂಡಿ ರಸ್ತೆಗಳ ಮೇಲೆ ಕಸ ಚೆಲ್ಲದಂತೆ ನೋಡಿಕೊಳ್ಳಬೇಕು. ಅಲ್ಲದೇ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಮತ್ತು ಫಾಗಿಂಗ್ ಮಾಡಬೇಕು ಎಂದರು.

ಕುಕನೂರು, ಯಲಬುರ್ಗಾ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮುಖ್ಯಾಧಿಕಾರಿಗಳು, ಪಿಡಿಒಗಳು ಡೆಂಘೀ ನಿಯಂತ್ರಣದ ಕುರಿತು ಆಶಾ ಕಾರ್ಯಕರ್ತರ ಮೂಲಕ ಈ ಜಾಗೃತಿ ಅರಿವು ಮಾಡಿಸಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು ೨೨ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡುವ ಕೆಲಸ ಮಾಡಲಾಗಿದೆ ಎಂದರು. ಕುಡಿಯುವ ನೀರು ಪರೀಕ್ಷೆ ಮಾಡಿಸಬೇಕು, ಬಳಕೆ ನೀರನ್ನು ಹೆಚ್ಚು ದಿನ ಇಡದೆ ಸ್ವಚ್ಛಗೊಳಿಸಬೇಕು, ಸೊಳ್ಳೆ ಬರದ ಹಾಗೇ ಎಚ್ಚರವಹಿಸಬೇಕು ಎಂದು ಮಲ್ಲಪ್ಪ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ಮೇಲ್ವಿಚಾರಕಿ ಜಯಲಕ್ಷ್ಮಿ ಮಾತನಾಡಿ, ತಾಲೂಕಿನ 9 ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಗ್ರಾಪಂನಿಂದ ನಿವೇಶನ ಒದಗಿಸಬೇಕು. ಸೈಟ್ ಸಮಸ್ಯೆ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬೇಕು. ನಿರ್ಮಿತಿ ಕೇಂದ್ರದವರು ತ್ವರಿತವಾಗಿ ನಿರ್ಮಾಣಕ್ಕೆ ಮುದಾಗಬೇಕೆಂದರು. ತಾಪಂ ಇಒ ಸಂತೋಷ ಪಾಟೀಲ್ ಮಧ್ಯಪ್ರವೇಶಸಿ, ನಿವೇಶನದ ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು ತಮ್ಮ ಪ್ರಗತಿ ವರದಿ ಮಂಡಿಸಿದರು. ಈ ಸಂದರ್ಭ ಅಧಿಕಾರಿಗಳಾದ ಶ್ರೀಧರ ತಳವಾರ, ಶಿವಶಂಕರ ಕರಡಕಲ್ಲ, ಪ್ರಕಾಶ ಚೂರಿ, ಅಂದಪ್ಪ ಕುರಿ, ಬಸವರಾಜ ಗೊಗೇರಿ, ಎಫ್.ಡಿ. ಕಟ್ಟಿಮನಿ, ಪ್ರೇಮಾ, ಮಹಾಂತೇಶ ಮಠದ ಮತ್ತಿತರರು ಇದ್ದರು.