ಸಾರಾಂಶ
ಹುಬ್ಬಳ್ಳಿ:
ರಾಷ್ಟ್ರೀಯ ಸ್ವಯಂಸೇವಕರು ಪಾಲಕರಲ್ಲಿ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸಬೇಕೆಂದು ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹೇಳಿದರು.ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವಾದ ಕೇಶವ ಕುಂಜದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರಸ್ತುತವಾಗಿ ಮಕ್ಕಳಿಗೆ ಇಂಗ್ಲಿಷ್ ಭಾಷೆ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ನೀಡದಿದ್ದರೆ ಬೇರೆ ದಾರಿಯೇ ಇಲ್ಲ ಎಂಬ ಮನೋಭಾವದಲ್ಲಿ ಪಾಲಕರಿದ್ದಾರೆ. ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಆಂಗ್ಲ ಭಾಷೆ ಶಿಕ್ಷಣ ಕಲಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮೊದಲು ಪಾಲಕರು ಭಾರತೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ಭಾರತೀಯ ಸಂಸ್ಕೃತಿಯ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಹೇಳದಿದ್ದರೆ ಪಾಲಕರು ಹೋಗಿ ಶಿಕ್ಷಕರನ್ನು ಪ್ರಶ್ನಿಸಬೇಕು. ಆದರೆ, ಯಾವ ತಂದೆ-ತಾಯಿ ಈ ಕೆಲಸ ಮಾಡುವುದಿಲ್ಲ. ಸ್ವಯಂಸೇವಕರು ಪ್ರತಿಯೊಂದು ಮನೆಗೆ ಭೇಟಿ ನೀಡಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಬೇಕು ಎಂದರು.ಮನಸ್ಸು ಗೆಲ್ಲಿ:
ಆರ್‌ಎಸ್‌ಎಸ್ ಎಲ್ಲರನ್ನೂ ಸಮಾನರಾಗಿ ಕಾಣುತ್ತದೆ. ಇಲ್ಲಿ ಪ್ರತಿಯೊಬ್ಬರೂ ಸ್ವಯಂಸೇವಕರೆ. ಆದ್ದರಿಂದಲೇ ಸಂಘವನ್ನು ಎಲ್ಲರೂ ಗೌರವಿಸುತ್ತಾರೆ. ಸ್ವಯಂ ಸೇವಕರು ಕೆಳ ಜಾತಿಯವರ ಮನೆಗೆ ಹೋಗಿ ಅರಿವು ಮೂಡಿಸಿ ಅವರ ಮನಸ್ಸು ಗೆಲ್ಲಬೇಕು. ಆರ್‌ಎಸ್‌ಎಸ್ ಎಂದಿಗೂ ಜಾತಿ ಬೇಧ-ಭಾವ ಮಾಡಿಲ್ಲ. ಕೆಲವರು ವ್ಯವಸ್ಥಿತವಾಗಿ ಈ ರೀತಿಯಾಗಿ ಬಿಂಬಿಸುವ ಕಾರ್ಯ ಕೈಗೊಳ್ಳುತ್ತಿದ್ದು, ಈ ಕುರಿತು ಸ್ವಯಂ ಸೇವಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.ಆರ್‌ಎಸ್‌ಎಸ್‌ನ್ನು ಬಹಳ ಹಿಂದಿನಿಂದಲೂ ನೋಡುತ್ತಾ ಬಂದಿದ್ದೇನೆ. ಸಂಘದ ಹಿರಿಯರಾದ ಕೃಷ್ಣಪ್ಪ ಅವರು ನಾನು ಇತಿಹಾಸ ಓದಲು ಹೇಳಿದ್ದರು. ಅವರ ಪ್ರೇರಣೆಯಿಂದ ಇತಿಹಾಸದ ಎಲ್ಲ ಪುಸ್ತಕಗಳ ಅಧ್ಯಯನ ಮಾಡಿದೆ. ಇದರಿಂದಾಗಿಯೇ ನನಗೆ ಅನೇಕ ಕಾದಂಬರಿ ಬರೆಯಲು ಸಹಕಾರಿಯಾಯಿತು ಎಂದು ಹೇಳುವ ಮೂಲಕ ಸಂಘಕ್ಕೂ ಹಾಗೂ ಅವರಿಗೆ ಇರುವ ಅವಿನಾಭಾವ ಸಂಬಂಧದ ಬಗ್ಗೆ ತಿಳಿಸಿದರು.
ಸುದೀರ್ಘ ಅಧ್ಯಯನ ಅವಶ್ಯಕ:ಕೇವಲ ಕಥೆ ಬರೆಯುವುದರಿಂದ ಸಾಹಿತಿಗಳಾಗಲು ಸಾಧ್ಯವಿಲ್ಲ. ಗಟ್ಟಿ ಸಾಹಿತಿಯಾಗಲು ಸುದೀರ್ಘ ಅಧ್ಯಯನ ಅವಶ್ಯಕ. ಹಿರಿಯ ಸಾಹಿತಿಗಳಿಂದ ಮಾರ್ಗದರ್ಶನ ಪಡೆಯಬೇಕು. ಯಾವುದೇ ಒಂದು ಕವಿತೆ ಹಾಗೂ ಕಥೆ ಬರೆಯಲು ಮೊದಲು ಅದರ ಬಗ್ಗೆ ಅಧ್ಯಯನ ಮಾಡಬೇಕು. ಯುವ ಸಾಹಿತಿಗಳು ಇದನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಈ ವೇಳೆ ಸಂಘದ ಪ್ರಮುಖರಾದ ಶ್ರೀಧರ ನಾಡಗೇರ, ಗೋವಿಂದಪ್ಪ ಗೌಡಪ್ಪಗೋಳ, ಶಿವಾನಂದ ಅವಟಿ, ನರೇಂದ್ರ ಸೇರಿದಂತೆ ಹಲವರಿದ್ದರು.