ಸಾರಾಂಶ
- ಅರ್ಹರಿಗೆ ಯೋಜನೆ ತಲುಪಲು ಶ್ರಮಿಸುವಂತೆ ಡಿಸಿ ಗಂಗಾಧರಸ್ವಾಮಿ ಸೂಚನೆ । ಲಿಂಗತ್ವ ಅಲ್ಪಸಂಖ್ಯಾತರ ಸಮನ್ವಯ ಸಮಿತಿ ಸಭೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ತೃತೀಯ ಲಿಂಗಿಗಳು (ಟ್ರಾನ್ಸ್‌ಜೆಂಡರ್) ಹಾಗೂ ದಮನಿತ ಮಹಿಳೆಯರ ಜೀವನಮಟ್ಟ ಸುಧಾರಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆ, ಸೌಲಭ್ಯಗಳ ಬಳಸಿಕೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಗಳು ಜನಜಾಗೃತಿ ಮೂಡಿಸುಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಲಿಂಗತ್ವ ಅಲ್ಪಸಂಖ್ಯಾತರ ಸಮನ್ವಯ ಸಮಿತಿ ಹಾಗೂ ದಮನಿತ ಮಹಿಳೆಯರ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅರ್ಹರಿಗೆ ಅರಿವು, ಮಾರ್ಗದರ್ಶನ ನೀಡುವ ಕೆಲಸ ಆಗಬೇಕು. ಮುಂದಿನ ಸಭೆಯಲ್ಲಿ ಈ ಎರಡೂ ವರ್ಗದವರಿಗೆ ಇಲಾಖೆವಾರು ಸೌಲಭ್ಯ ಕಲ್ಪಿಸಿರುವ ಬಗ್ಗೆ ಮಾಹಿತಿ ನೀಡಬೇಕು. ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗವೆಂದು ಟ್ರಾನ್ಸ್‌ಜೆಂಡರ್‌ಗಳನ್ನು ಪರಿಗಣಿಸಿ, ಅಂತಹವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದರು.ತೃತೀಯ ಲಿಂಗಿಗಳು ಆರ್ಥಿಕ ಸ್ವಾವಲಂಬಿಗಳಾಗಿ, ಜೀವನ ನಡೆಸಲು, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಆರ್ಥಿಕ ಸ್ವಾವಲಂಬನೆ ಸಾಧಿಸಲು ನಿಗಮದಿಂದ ₹30 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಎಚ್ಐವಿ ಸೋಂಕಿತ ಮಹಿಳೆಯರು ಸ್ವಉದ್ಯೋಗ ಕೈಗೊಂಡು, ಅಭಿವೃದ್ಧಿ ಹೊಂದಲು ಸಹ ಸೌಲಭ್ಯ ನೀಡಲಾಗುತ್ತದೆ. ಪ್ರತಿ ಫಲಾನುಭವಿಗೆ ನಿಗಮದಿಂದ ₹10 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ದಮನಿತ ಮಹಿಳೆಯರ ಸಮಸ್ಯೆಗಳು, ಹಕ್ಕುಗಳ ಸಂರಕ್ಷಣೆ, ಶಿಫಾರಸು ಹಾಗೂ ದೀರ್ಘಕಾಲಿನ ಕಾರ್ಯಕ್ರಮಗಳ ಬಗ್ಗೆ, ಲಿಂಗತ್ವ ಅಲ್ಪಸಂಖ್ಯಾತರ ಚೇತನ ಯೋಜನೆಯಡಿ ಸಾಲ, ಮೈತ್ರಿಯಡಿ ನೀಡುತ್ತಿರುವ ಪಿಂಚಣಿ, ವಯಸ್ಸಾದವರಿಗೆ ವೃದ್ಧಾಶ್ರಮ ಮತ್ತು ಪಿಂಚಣಿ, ಸರ್ಕಾರಿ ವ್ಯವಸ್ಥೆಯಲ್ಲಿ ಸರ್ಕಾರಿ, ಅರೆಸರ್ಕಾರಿ, ಗುತ್ತಿಗೆ ಆಧಾರಿತ ಉದ್ಯೋಗ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಡಿಯುಡಿಸಿ ಯೋಜನಾ ನಿರ್ದೇಶಕ ಡಾ.ಮಹಾಂತೇಶ, ಕರ್ನಾಟಕ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಐ.ಟಿ.ಮಂಜುಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
- - -ಬಾಕ್ಸ್ * ಯೋಜನೆಗಳಗೆ ಅರ್ಹರ ಆಯ್ಕೆ ಲಾಟರಿ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ 31 ಗುರಿಗಳಲ್ಲಿ 17 ಜನರನ್ನು ಆಯ್ಕೆ ಮಾಡಲಾಯಿತು. ಚೇತನ ಯೋಜನೆಯಲ್ಲಿ 21 ಗುರಿಗಳಿಗೆ 21 ಜನರನ್ನು, ಧನಶ್ರೀ ಯೋಜನೆಯಲ್ಲಿ 21 ಗುರಿಗಳಲ್ಲಿ 21 ಜನ, ದೇವದಾಸಿ ಪುನರ್ವಸತಿ ಯೋಜನೆಯಲ್ಲಿ 11 ಗುರಿಗಳಲ್ಲಿ 11 ಜನ, ಉದ್ಯೋಗಿನಿಯಲ್ಲಿ 4 ಜನರನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಮಕ್ಷಮ ಆಯ್ಕೆ ಮಾಡಲಾಯಿತು.
- - - -24ಕೆಡಿವಿಜಿ1, 2:ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಲಿಂಗತ್ವ ಅಲ್ಪಸಂಖ್ಯಾತರ ಸಮನ್ವಯ ಸಮಿತಿ ಹಾಗೂ ದಮನಿತ ಮಹಿಳೆಯರ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.