ಮಕ್ಕಳ ರಕ್ಷಣೆ, ಪೋಷಣೆ ಕುರಿತು ಜಾಗೃತಿ ಮೂಡಿಸಿ: ಬಿಇಒ ಮರೀಗೌಡ ಸಲಹೆ

| Published : Feb 13 2024, 12:49 AM IST

ಮಕ್ಕಳ ರಕ್ಷಣೆ, ಪೋಷಣೆ ಕುರಿತು ಜಾಗೃತಿ ಮೂಡಿಸಿ: ಬಿಇಒ ಮರೀಗೌಡ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಕುರಿತು ಪೋಷಕರು ಕಾಳಜಿ ವಹಿಸಿ, ಜ್ಞಾನ ಸಂಪಾದಿಸುವ ಉಡುಗೊರೆಗಳನ್ನು ಕೊಡಿಸಬೇಕು. ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ಉನ್ನತ ಹುದ್ದೆಗೆ ಏರುವಂತಹ ಕನಸುಗಳನ್ನು ರೂಪಿಸಬೇಕು. ಮಹನೀಯರ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಮಕ್ಕಳು ದೇಶದ ಆಸ್ತಿ, ಅವರ ರಕ್ಷಣೆ ಮತ್ತು ಪೋಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಬಿಇಒ ಬಿ.ಎನ್. ಮರೀಗೌಡ ಸಲಹೆ ನೀಡಿದರು.

ತಾಲೂಕಿನ ಸಂಕಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮತ್ತೀಕೆರೆ ಗ್ರಾಪಂ, ಪಡಿ ಸರ್ಕಾರೇತರ ಸಂಸ್ಥೆ ಹಾಗೂ ಸಂಕಲಗೆರೆ ಸರ್ಕಾರಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಕುರಿತು ಪೋಷಕರು ಕಾಳಜಿ ವಹಿಸಿ, ಜ್ಞಾನ ಸಂಪಾದಿಸುವ ಉಡುಗೊರೆಗಳನ್ನು ಕೊಡಿಸಬೇಕು. ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ಉನ್ನತ ಹುದ್ದೆಗೆ ಏರುವಂತಹ ಕನಸುಗಳನ್ನು ರೂಪಿಸಬೇಕು. ಮಹನೀಯರ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು. ಆಗ ನಾವು ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಪಡಿ ಸರ್ಕಾರೇತರ ಸಂಸ್ಥೆಯ ವಕಾಲತ್ತು ಸಂಯೋಜಕ ಯೋಗೇಶ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಉತ್ತಮ ಸಮಾಜ ಕಟ್ಟಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಬೆಳೆಸಬೇಕಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾರ್ವಜನಿಕರು ಮಕ್ಕಳ ಸಹಾಯವಾಣಿ ೧೦೯೮ ಸಂಪರ್ಕಿಸಬೇಕು.ಮುಕ್ತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಮಕ್ಕಳೊಡನೆ ಮುಕ್ತ ಸಂವಾದ ನಡೆಸಿದರು.

ಮತ್ತೀಕೆರೆ ಗ್ರಾಮ ಪಂಚಾಯತಿ ಪಿಡಿಒ ಬಿ.ಆರ್. ಶೋಭಾ ಮಾತನಾಡಿದರು.

ವಿದ್ಯಾರ್ಥಿನಿಯೊಬ್ಬರು ಸಂವಿಧಾನ ಪೀಠಿಕೆ ಮೂಲಕ ಸಭಿಕರಿಗೆ ಪ್ರತಿಜ್ಞೆ ಬೋಧಿಸಿದರು.

ಸಿಆರ್‌ಪಿಗಳಾದ ಚಂದ್ರಿಕಾ, ಗಿರಿಜೇಶ್, ಸಂಕಲಗೆರೆ ಶಾಲೆ ಮುಖ್ಯ ಶಿಕ್ಷಕ ಕೆ. ದೇವರಾಜು ಹಾಗೂ ಸಹ ಶಿಕ್ಷಕರು, ಪಡಿ ಸಂಸ್ಥೆ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.